ಮೈಸೂರು: ''ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಕಗ್ಗಂಟು ಇಲ್ಲ. ನಾಳೆ ಅಥವಾ ನಾಡಿದ್ದು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತದೆ. ನಾವು 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಮೈಸೂರು ವಿಮಾನ ನಿಲ್ದಾಣಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಕಗ್ಗಂಟು ಇಲ್ಲ. ಯಾವುದೇ ಎಳೆದಾಟ ಆಗಿಲ್ಲ. ನಾಳೆ ಅಥವಾ ನಾಡಿದ್ದು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ. 20 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿ ಅವರ ರೀತಿ 28 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆಂದು ಸುಳ್ಳು ಹೇಳುವುದಿಲ್ಲ'' ಎಂದರು.
ಜೆಡಿಎಸ್- ಬಿಜೆಪಿ ಮೈತ್ರಿಯಿಂದ ನಮಗೆ ಅನುಕೂಲ- ಸಿಎಂ ಸಿದ್ದರಾಮಯ್ಯ: ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ಅನಾನುಕೂಲ ಆಗುವುದಿಲ್ಲ. ಬದಲಾಗಿ ಜೆಡಿಎಸ್- ಬಿಜೆಪಿ ಮೈತ್ರಿಯಿಂದ ನಮಗೆ ಅನುಕೂಲ ಆಗುತ್ತದೆ. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಅವರ ರೀತಿ ಸುಳ್ಳನ್ನು ಹೇಳುವುದಿಲ್ಲ. ಬಿಜೆಪಿಯವರು 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇಕಡಾ 10 ರಷ್ಟು ಈಡೇರಿಸಿಲ್ಲ. ಮೋದಿ ಅವರು ಜನರಿಗೆ 15 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು ಕೊಟ್ಟಿದ್ದಾರಾ? 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು ಮಾಡಿದ್ದಾರಾ? ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದಿದ್ದರು, ಮಾಡಿದ್ದಾರಾ?'' ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದರು.
ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ: ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಕುಟುಂಬ ರಾಜಕಾರಣ ವಿಚಾರದ ಕುರಿತು ಸ್ಪಷ್ಟವಾಗಿ ನಿರಾಕರಿಸಿದ ಸಿದ್ದರಾಮಯ್ಯನವರು, ''ಜನರು ಬಯಸಿದವರಿಗೆ ಟಿಕೆಟ್ ಕೊಟ್ಟಿದ್ದೇವೆ. ಇದರಲ್ಲಿ ಕುಟುಂಬ ರಾಜಕಾರಣ ಇಲ್ಲ'' ಎಂದು ಸ್ಪಷ್ಟಪಡಿಸಿದರು.
ಹೆಚ್ಚಿನ ಕ್ಷೇತ್ರ ಗೆಲ್ಲದಿದ್ದರೆ, ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಾಗಬಹುದು ಎಂಬ ಗುಬ್ಬಿ ಶ್ರೀನಿವಾಸ್ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಗುಬ್ಬಿ ಶ್ರೀನಿವಾಸ್ ಹೇಳಿಕೆಯಲ್ಲಿ ಹಿಂದೆ, ಮುಂದೆ ಬಿಟ್ಟುಬಿಡ್ತೀರಾ? ಅವರ ಪೂರ್ಣ ಅರ್ಥದ ಮಾತು ತೋರಿಸಲ್ಲ. ಅವರು ಹೇಳಿರೋದು ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡಿದ್ದಾರೆ. ಜನರು ಅವರನ್ನ ಬೆಂಬಲಿಸಬೇಕು. ಇದನ್ನ ಬಿಟ್ಟು ಬೇರೆ ಏನು ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಸಿದ್ದರಾಮಯ್ಯನವರದ್ದು ಪೊಲಿಟಿಕಲ್ ಸ್ಟಂಟ್ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ'' ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿದರು.
ಇದನ್ನೂ ಓದಿ: ದೇವರ ಅನುಗ್ರಹ, ಜನರ ಪ್ರಾರ್ಥನೆ ಫಲ ಕೊಟ್ಟಿದೆ: ಹೆಚ್ಡಿಕೆ - H D Kumaraswamy Heart Surgery