ಬೆಂಗಳೂರು: ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ. 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರದ್ದೂ ಸೇರಿದಂತೆ ಸುಮಾರು 1,200 ಕ್ಕೂ ಅಧಿಕ ನಿವೇಶನಗಳ ಹಗರಣ ನಡೆದಿದೆ ಎಂಬ ದೂರು ಬಂದಿದ್ದು, ಅದಕ್ಕಾಗಿ ದಾಳಿ ಮಾಡಲಾಗಿದೆ. 3-4 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಮುಡಾ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನವರೇ ಆದ ಮರಿಗೌಡ ಪತ್ರದಲ್ಲಿ ತಿಳಿಸಿದ್ದರು. ಅದಾದ ಬಳಿಕ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದಾರೆ. ಇದರಲ್ಲಿ ರಾಜಕೀಯದ ಪ್ರಶ್ನೆ ಉದ್ಭವವೇ ಆಗುವುದಿಲ್ಲ. ಇದರಲ್ಲಿ ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲ ಎಂದು ತಿಳಿಸಿದರು.
ಇದನ್ನು ರಾಜಕೀಯವಾಗಿ ನೋಡಬಾರದು. ನಿವೇಶನಗಳು ವಾಪಸ್ ಸಿಕ್ಕರೆ ಹಾಗೂ ಹಣ ಸಿಕ್ಕರೆ ರಾಜ್ಯ ಸರ್ಕಾರಕ್ಕೆ ಲಾಭವಾಗುತ್ತದೆ. ಸರ್ಕಾರದಲ್ಲಿ ಖಜಾನೆ ಖಾಲಿಯಾಗಿ ಸಂಬಳ ಕೊಡಲಾಗದ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಖಜಾನೆಗೆ ಹಣ ಬಂದರೆ ಒಳ್ಳೆಯದು. ಇದನ್ನು ಕಾಂಗ್ರೆಸ್‌ನವರು ಸ್ವಾಗತಿಸಬೇಕು. ಇದನ್ನು ರಾಜಕಾರಣ ಎನ್ನಲು ಬಿಜೆಪಿ ನಾಯಕರೇನೂ ದೂರು ನೀಡಿಲ್ಲ ಎಂದು ಹೇಳಿದರು.
ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂದಾದರೆ 3-4 ಸಾವಿರ ಕೋಟಿ ರೂ. ಹಣದ ಅಕ್ರಮ ನಡೆದಿರುವುದು ಹೇಗೆ? ನಿವೇಶನ ಮಂಜೂರಾಗಿದೆ ಎಂದ ಮೇಲೆ ಅದರ ಹಣ ಯಾರಿಗಾದರೂ ಸಿಕ್ಕೇ ಸಿಕ್ಕಿರುತ್ತದೆ. ಅದಕ್ಕೆ ನಗದಿನಲ್ಲಿ ಹಣ ನೀಡಲಾಗಿರುತ್ತದೆ. ಅಂತಹ ನಗದು ಕಪ್ಪು ಹಣವೇ ಆಗಿರುತ್ತದೆ. ಇ.ಡಿ ಬಗ್ಗೆ ಪ್ರಶ್ನೆ ಮಾಡುವವರು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರು ಕೋರ್ಟ್‌ಗೆ ಹೋಗಲೇ ಇಲ್ಲ. ಇ.ಡಿ.ಗೆ ಅಧಿಕಾರ ಇಲ್ಲವೆಂದಾದರೆ ಎಸ್‌ಐಟಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ ಎಂದರು.
ಮುಂದಿನ ಹೋರಾಟದ ಕುರಿತು ಪಕ್ಷದ ಮಟ್ಟದಲ್ಲಿ ಚರ್ಚಿಸಲಾಗುವುದು. ಇ.ಡಿ. ದಾಳಿಯ ನಂತರ ದಾಖಲೆಗಳು ಸಿಕ್ಕ ಬಳಿ ಪರಿಶೀಲಿಸಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಒಂದೇ ಮಳೆಗೆ ಬೆಂಗಳೂರಲ್ಲಿ ಅವಾಂತರ: ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಏನು ಎಂಬುದನ್ನು ಬಟಾ ಬಯಲು ಮಾಡಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಈ ಕುರಿತು 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, 40% ಕಮಿಷನ್ ಸರ್ಕಾರ ಅಂತ ಸುಳ್ಳು, ಅಪಪ್ರಚಾರದ ಮೂಲಕ ಕನ್ನಡಿಗರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ತನ್ನ ಭ್ರಷ್ಟಾಚಾರದ ಹಸಿವು, ದಾಹ ನೀಗಿಸಿಕೊಳ್ಳಲು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನ ಬಲಿ ಕೊಡುತ್ತಿದೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಾಜಧಾನಿಯ ರಸ್ತೆಗಳು ಕೆರೆಗಳಾಗಿವೆ, ಬಡಾವಣೆಗಳು ಜಲಾವೃತವಾಗಿವೆ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ಹೊಡೆದು, ಸಿಲಿಕಾನ್ ಸಿಟಿ ಜನರನ್ನು ಮಳೆ ನೀರಲ್ಲಿ ಮುಳುಗಿಸಿ, ಬೆಂಗಳೂರಿನ ಮರ್ಯಾದೆ ಹರಾಜು ಹಾಕಿದ್ದೀರಲ್ಲ, ಇದೇನಾ ತಾವುಗಳು ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡುವ ಪರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮುಡಾ ಕಚೇರಿಯಲ್ಲಿ ಇ.ಡಿ ಪರಿಶೀಲನೆ: ಸಂಸದ ಯದುವೀರ್, ಶಾಸಕ ಶ್ರೀವತ್ಸ ಹೇಳಿದ್ದೇನು?