ಚಿಕ್ಕಮಗಳೂರು: ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ, ಬಿಜೆಪಿ ಮಾತ್ರ ಇದೆ ಎಂದು ಸಿ.ಟಿ.ರವಿ ತಿಳಿಸಿದರು. ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿಗಾಗಿ ನಾವು ಈ ಹಿಂದೆಯೂ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ. ನಮ್ಮ ನಿಷ್ಠೆಯನ್ನು ಎದೆ ಬಗೆದು ತೋರಿಸಲು ಸಾಧ್ಯವಿಲ್ಲ. ಒಂದು ಚುನಾವಣೆಗೆ ಒಂದು, ಇನ್ನೊಂದು ಚುನಾವಣೆಗೆ ಇನ್ನೊಂದು ನೀತಿ ಹೊಂದಿದವರಲ್ಲ. ನಾನು ಹುಟ್ಟಿರುವುದು ಬಿಜೆಪಿಯಲ್ಲೇ, ಸಾಯುವುದೂ ಬಿಜೆಪಿಯಲ್ಲೇ. ನನ್ನ ಪಕ್ಷ ನಿಷ್ಠೆ ಬಗ್ಗೆ ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲ. ನನ್ನ ನಿಯತ್ತು ನನಗೆ ಗೊತ್ತಿದೆ ಎಂದರು.
ನಾನು ಹಲವಾರು ರಾಜ್ಯಗಳಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ನಮ್ಮಲ್ಲಿ ಟಿಕೆಟ್ ನೀಡುವ ಪದ್ಧತಿ ಹೇಗಿದೆ ಎಂಬುದು ಗೊತ್ತು. ನಾನು ಟಿಕೆಟ್ ಕೇಳಿ ಪಡೆಯುವುದಿಲ್ಲ. ಪಕ್ಷ ಏನು ಹೇಳಿದೆ, ಅದನ್ನು ಇಲ್ಲಿಯವರೆಗೂ ಕೇಳಿಕೊಂಡು ಬಂದಿದ್ದೇನೆ. ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್ ಇನ್ನೂ ಆಗಿಲ್ಲ. ಮೀಟಿಂಗ್ ಆದ ನಂತರ ಟಿಕೆಟ್ ಯಾರಿಗೆ ನೀಡಬೇಕು ಎಂದು ಯೋಚನೆ ಮಾಡುತ್ತಾರೆ. ಈವರೆಗೂ ಫೈನಲ್ ಆಗಿರುವುದು ಒಂದೇ ಅದು ಮೋದಿ ಮತ್ತೊಮ್ಮೆ, ಕಮಲವೇ ನಮ್ಮ ಅಭ್ಯರ್ಥಿ ಎಂಬುದು. ಈ ನಿಟ್ಟಿನಲ್ಲಿ ಪಕ್ಷವನ್ನು ತಯಾರು ಮಾಡುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಪಾರ್ಟಿಯಲ್ಲಿ ಟಿಕೆಟ್ ನೀಡುವ ಮಾನದಂಡ ಬೇರೆಯೇ ಇದೆ. ಅತಿರೇಕದ ಚಟುವಟಿಕೆಯನ್ನು ಯಾರೂ ಮಾಡಬಾರದು. ಇದು ನನ್ನ ಮನವಿ ಎಂದು ತಿಳಿಸಿದರು.
ಇದನ್ನೂ ಓದಿ: ನಾನು ಟಿಕೆಟ್ ಆಕಾಂಕ್ಷಿ, ನನಗೂ ಟಿಕೆಟ್ ಸಿಗುವ ವಿಶ್ವಾಸವಿದೆ: ಪುಷ್ಪಾ ಅಮರನಾಥ್