ಚಿಕ್ಕೋಡಿ (ಬೆಳಗಾವಿ): "ಸರ್ಕಾರ ಮಟ್ಟದಲ್ಲಿ ಚಿಕ್ಕೋಡಿ ಅಥವಾ ಅಥಣಿಯನ್ನು ನೂತನ ಜಿಲ್ಲೆಯಾಗಿ ರಚನೆ ಮಾಡುವ ಬಗ್ಗೆ ಪ್ರಸ್ತಾವನೆ ಇಲ್ಲ" ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಶನಿವಾರ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, "ನೂತನ ಜಿಲ್ಲಾ ರಚನೆಗೆ ಸರ್ಕಾರ ಮಟ್ಟದಲ್ಲಿ ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಮತ್ತು ಯಾವುದೇ ರೀತಿಯ ಚರ್ಚೆಯೂ ನಡೆದಿಲ್ಲ" ಎಂದು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಆಗುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, "ಎಲ್ಲವೂ ಊಹಾಪೋಹ" ಎಂದು ತಿಳಿಸಿದರು. "ಮಹದಾಯಿ ಯೋಜನೆ ಕುರಿತು ಹೊಸದಾಗಿ ಬಂದ ವಕೀಲ ಎಸ್.ಆರ್.ಕರೋಶಿ ಜೊತೆಗೆ ಮಾತನಾಡಿದ್ದೇನೆ. ಈ ಬಗ್ಗೆ ಗಂಭೀರವಾಗಿ ಪ್ರಯತ್ನ ಮಾಡಬೇಕಾಗಿದೆ. ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಈ ಯೋಜನೆ ಕುರಿತು ಗೋವಾ ಸರ್ಕಾರದ ನಿಲುವಿನ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತೇವೆ" ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರದ ಕುರಿತು ಪ್ರತಿಕ್ರಿಯಿಸಿ, "ಈಗಾಗಲೇ ಪ್ರಕರಣವನ್ನು ಎಸ್ಐಟಿ ಪೊಲೀಸರಿಗೆ ನೀಡಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಕೆಲವು ಅಧಿಕಾರಿಗಳನ್ನು ಕೂಡ ಅಮಾನತು ಮಾಡಲಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ" ಎಂದು ತಿಳಿಸಿದರು.
"ಅಥಣಿ ತಾಲೂಕಿನಲ್ಲಿ ನೂತನವಾಗಿ ಸ್ಥಾಪನೆಯಾದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ 36 ಕೋಟಿ ರೂಪಾಯಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಜೊತೆಗೆ ಮತ್ತು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಮಂಜೂರು ಮಾಡಲಾಗುವುದು" ಎಂದು ಭರವಸೆ ನೀಡಿದರು.
"ಬಡವರಿಗೆ ತ್ವರಿತವಾಗಿ ನ್ಯಾಯ ಕೊಡುವುದು ಅಥಣಿಯಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಯ ಉದ್ದೇಶವಾಗಿದೆ. ಜನರಿಗೆ ನ್ಯಾಯಾಂಗದಲ್ಲಿ ಬಹುದೂಡ್ಡ ವಿಶ್ವಾಸ ಇದೆ. ನ್ಯಾಯದಾನ ವಿಳಂಬವಾಗುತ್ತಿರುವುದನ್ನು ನ್ಯಾಯಾಧೀಶರು, ವಕೀಲರು ಗಂಭೀರವಾಗಿ ಚಿಂತನೆ ಮಾಡಿದರೆ, ಇದಕ್ಕೆ ಒಂದು ಅರ್ಥ ಬರುತ್ತದೆ. ಹಾಗೂ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗೆ ಗೌರವ ಸಿಗುವಂತೆ ಆಗಬೇಕು" ಎಂದು ಹೇಳಿದರು.
"ಮುಂದಿನ ದಿನಗಳಲ್ಲಿ ಎಲ್ಲ ತಾಲೂಕು ಮಟ್ಟದಲ್ಲಿ ವಕೀಲ ಚೇಂಬರ್ ಮಾಡಲು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದೇವೆ. ಜೊತೆಗೆ ಹೊಸದಾಗಿ ಬಂದಿರುವ ಎಲ್ಲ ವಕೀಲರಿಗೆ ತರಬೇತಿ ಅವಶ್ಯಕತೆ ಇರುವುದರಿಂದ ಸರ್ಕಾರದಿಂದ ಅಡ್ವೋಕೇಟ್ ಟ್ರೈನಿಂಗ್ ಅಕಾಡೆಮಿಯನ್ನು ಪ್ರಾರಂಭಿಸಬೇಕೆಂದು ನಿರ್ಣಯ ಮಾಡಿದ್ದೇವೆ" ಎಂದು ಹೇಳಿದರು.
"ಅಥಣಿ ಶಾಸಕ ಲಕ್ಷ್ಮಣ್ ಸವದಿ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಈ ಕುರಿತು ನಾನು ಕೂಡ ಅವರ ಜೊತೆ ದೂರವಾಣಿ ಮುಖಾಂತರ ಮಾತನಾಡಿದ್ದೇನೆ. ಅವರು ರಿಜಿಸ್ಟ್ರೇಷನ್ ಕಮಿಟಿ ಜೊತೆಗೆ ಪ್ರವಾಸದಲ್ಲಿದ್ದಾರೆ. ಅದರಿಂದ ಈ ಕಾರ್ಯಕ್ರಮಕ್ಕೆ ಅವರು ಬಂದಿಲ್ಲ" ಎಂದು ತಿಳಿಸಿದರು.