ಹಾವೇರಿ: ಚಿತ್ರನಟ ದರ್ಶನ ನಾನು ಕೃಷಿ ರಾಯಭಾರಿಯಾಗಿ ಮಾಡಿದ ವೇಳೆ ದರ್ಶನ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಜನಪ್ರಿಯ ನಟನನ್ನು ರಾಯಭಾರಿ ಮಾಡಿದರೆ ರೈತರಿಗೆ ಅನುಕೂಲ ಆಗುತ್ತದೆ ಎಂದು ಮಾಡಿದ್ದೆವು ಎಂದು ತಿಳಿಸಿದರು.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ತನಿಖೆ ಆಗಬೇಕು, ಆರೋಪಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಹಿಡಿದು ಹಾಕಬೇಕು. ಈಗ ಬ್ಯಾನ್ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಪಾಟೀಲ್ ತಿಳಿಸಿದರು.
ದರ್ಶನ ಈಗ ಆರೋಪಿ, ಅಪರಾಧಿಯಲ್ಲ. ಈ ಕೇಸ್ನಲ್ಲಿ ಯಾರ್ಯಾರ ಕೈವಾಡವಿದೆ ಎಂಬುದು ಬೆಳಕಿಗೆ ಬರುತ್ತದೆ. ಎಫ್ಐಆರ್ ಪ್ರಕಾರ ತನಿಖೆ ನಡೆಯುತ್ತದೆ. ದರ್ಶನ ಕಲಾವಿದ, ಸ್ನೇಹಿತನಾಗಿ ಪರಿಚಯ. ಅವರ ಬಳಿ ಯಾರ್ಯಾರು ಇದ್ದರು, ಏನು ಎಂಬುದು ನನಗೆ ಗೊತ್ತಿಲ್ಲ ಎಂದು ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.
ತೈಲ ಬೆಲೆ ಏರಿಕೆಯಿಂದ ಎಲ್ಲವೂ ದುಬಾರಿ: ದಿಢೀರ್ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು ದೊಡ್ಡ ಆಘಾತ ತಂದಿದೆ. ಒಂದೇ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದು ಇದೇ ಮೊದಲು. ಇದೊಂದು ರಾಬರಿ. ಸರ್ಕಾರದ ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ. ಸಾರ್ವಜನಿಕರು ಇದರ ವಿರುದ್ಧ ಪ್ರತಿಭಟನೆ ಮಾಡಬೇಕು. ಬೆಲೆ ಏರಿಕೆ ಮಾಡಿದ್ದು ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ ಎಂದು ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು.
ಒಂದು ವರ್ಷದಿಂದ ಹಾಲಿನ ಪ್ರೋತ್ಸಾಹಧನ ಬಂದಿಲ್ಲ. ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಈಗ ಎರಡು ರೂಪಾಯಿ ಹಾಲಿನ ದರ ಕಡಿಮೆ ಮಾಡಿದ್ದಾರೆ. ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಮಾಜಿ ಸಚಿವರು ವಾಗ್ದಾಳಿ ನಡೆಸಿದರು. ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಟ್ಟರೆ ವಿಚಾರ ಮಾಡೋಣ. ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಆಗಿದ್ದೆ. ಕೊಟ್ಟಿದ್ದರೆ ಗೆಲ್ಲುತ್ತಿದ್ದೆ. ವಿಧಾನಸಭೆ ಚುನಾವಣೆ ಹತ್ತಿರದಿಂದ ಇದ್ದವರು ನಿಲ್ಲುವುದು ಒಳ್ಳೆಯದು. ನಾನು ಹೋಗಿ ಅಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂಬುದು ಸರಿಯಲ್ಲ. ಸ್ಥಳೀಯರು, ಅಲ್ಲಿ ಕಷ್ಟಪಟ್ಟವರಿಗೆ ಟಿಕೆಟ್ ಕೊಡಬೇಕು. ಪಕ್ಷ ಸೂಚಿಸಿದರೂ ಬೇಡ ಎನ್ನುತ್ತೇನೆ. ಅಲ್ಲಿ ಹೋಗಿ ನಿಲ್ಲುವುದು ಕಷ್ಟಸಾಧ್ಯ. ಹರಕೆಯ ಕುರಿಯಾಗಬಹುದು ಎಂದು ಪಾಟೀಲ್ ತಿಳಿಸಿದರು.
ಸರ್ಕಾರ ಬೀಳುವುದು ಈಗಿಂದ ಆಟ ಶುರುವಾಗುತ್ತದೆ. ಎಲ್ಲದರ ದರ ಹೆಚ್ಚಿಸಿದ್ದಾರೆ. ಜನರು ತಿರಸ್ಕಾರ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅವರೇ ಗೌರವಾನ್ವಿತವಾಗಿ ರಾಜೀನಾಮೆ ಕೊಟ್ಟು ಹೋಗಬೇಕು. ಈ ಸರ್ಕಾರ ಬಂದರೆ ಬರಗಾಲ ಗ್ಯಾರಂಟಿ. ಕೊಲೆ, ಸುಲಿಗೆ ಪ್ರಕರಣಗಳು ಗ್ಯಾರಂಟಿ ಎಂದು ಹರಿಹಾಯ್ದರು.
ಸರ್ವಜ್ಞ ಏತ ನೀರಾವರಿ ಯೋಜನೆಗೆ 2023ರಲ್ಲೇ ಹಣ ಕೊಡುತ್ತೇವೆ ಅಂದಿದ್ದರು. ಈಗ ದುಡ್ಡಿಲ್ಲ, ದುಡ್ಡಿಲ್ಲ ಎನ್ನುತ್ತಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಬೊಮ್ಮಾಯಿ ಇದ್ದಾಗ ₹ 25 ಕೋಟಿ ಕೊಟ್ಟಿದ್ದರು. ಡಿಪಿಆರ್ ಕೂಡ ಆಗಿತ್ತು. ಹಣ ವಾಪಸ್ ಹೋಯಿತು ಎಂದು ಬಿ.ಸಿ. ಪಾಟೀಲ್ ಆರೋಪಿಸಿದರು.
ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ - Renukaswamy murder case