ಬೆಂಗಳೂರು : ಹೈಬ್ರಿಡ್ ಅಬ್ಬರಕ್ಕೆ ಸಿಲುಕಿ ದೇಸಿ ತಳಿಗಳು ಕಣ್ಮರೆಯಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದಿಂದಲೂ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅದೇ ರೀತಿ ರೈತರು ಸಹ ದೇಸಿ ತಳಿಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರಮುಖವಾಗಿ ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ಗುಂಡ್ಯಾನಟ್ಟಿ ಗ್ರಾಮದ ರೈತ ಶಂಕರ ಹನುಮಂತ ಲಂಗಟಿ ಹಾಗೂ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಅವರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರಿಯ ವಾಣಿಜ್ಯ, ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಮಳಿಗೆಗಳನ್ನು ಹಾಕಿಕೊಂಡಿದ್ದಾರೆ. ಇಲ್ಲಿ ದೇಶಿ ತಳಿಗಳ ಪ್ರದರ್ಶಿಸುವುದರ ಜೊತೆಗೆ ಆ ತಳಿಗಳ ಮಹತ್ವದ ಬಗ್ಗೆ ರೈತರಿಗೆ ತಿಳಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ರೈತ ಶಂಕರ ಹನುಮಂತ ಲಂಗಟಿ ಅವರು 210 ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಔಷಧ ಗುಣಗಳನ್ನು ಹೊಂದಿರುವ ಭತ್ತದ ದೇಶಿ ತಳಿ, ಬರ ನಿರೋಧಕ, ರೋಗ ನಿರೋಧಕ, ಬಾಣಂತಿ ಅಕ್ಕಿ, ಡಯಾಬಿಟಿಸ್ನವರಿಗೆ ಅನುಕೂಲವಾಗುವಂತಹ ಅಕ್ಕಿ ಸೇರಿದಂತೆ ಹಲವು ರೀತಿ ಭತ್ತವನ್ನು ಅವರು ಬೆಳೆಯುತ್ತಿದ್ದಾರೆ.
ಎಲ್ಲಾ ತಳಿಗಳಿಗೂ ಒಂದೊಂದು ವಿಶೇಷತೆ: ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಅವರು ಕೂಡ ಹಲವು ಬಗೆಯ ಜವಾರಿ ಜೋಳ ಬೆಳೆದು ಜನಮನ್ನಣೆ ಗಳಿಸಿದ್ದಾರೆ. ಸಾಮಾನ್ಯವಾಗಿ ರೈತರು ಒಂದೇ ತಳಿಯ ಬೆಳೆ ಬೆಳೆಯುತ್ತಾರೆ. ಆದರೆ, ಕಲ್ಲಪ್ಪ ಅವರು ಮಾತ್ರ ಕಳೆದ ಇಪ್ಪತ್ತು-ಇಪ್ಪತ್ತೈದು ವರ್ಷಗಳಿಂದ 22 ರೀತಿ ದೇಶಿ ಬೀಜ ಸಂರಕ್ಷಿಸುವ ಮೂಲಕ ಕಾಂತ್ರಿ ಮಾಡಿದ್ದಾರೆ. ಮುಖ್ಯವಾಗಿ ಕರಿಕಡ್ಲಿ, ಹಲಸಂದಿ, ತೊಗರಿ, ದೋಸೆ ಜೋಳ, ಗಟ್ಟಿ ತೆನೆ ಜೋಳ, ಮಾಲದಂಡಿ ಜೋಳ, ಮಲ್ಲೂರಿ ಜೋಳ, ದೋಸೆ ಜೋಳ, ಜವಾರಿ ಹೆಸರು, ಸದಕ, ಸಿರಿಧಾನ್ಯಗಳಾದ ನವಣೆ, ಬರ್ಗ, ರಾಗಿ, ಸಜ್ಜೆಯನ್ನೂ ಬೆಳೆಯುತ್ತಾರೆ. ಈ ಎಲ್ಲಾ ತಳಿಗಳಿಗೂ ಒಂದೊಂದು ವಿಶೇಷತೆ ಇರುವುದನ್ನು ಮೇಳದಲ್ಲಿ ಪ್ರದರ್ಶನ ಮಾಡಿದ್ದಾರೆ.
"ನಮ್ಮಲ್ಲಿ 210 ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದೇವೆ. ಔಷಧ ಗುಣಗಳ ತಳಿಗಳಿವೆ. ಬರ ನಿರೋಧಕ, ರೋಗ ನಿರೋಧಕ, ರಕ್ತ ಹೀನತೆ, ಡಯಾಬಿಟಿಸ್ನವರಿಗೆ, ಬಾಣಂತಿ ಅಕ್ಕಿ, ನರ ದೌರ್ಬಲ್ಯ ಸೇರಿದಂತೆ ಬೇರೆ ಬೇರೆ ರೀತಿಯ ಭತ್ತವನ್ನು ನಾವು ಬೆಳೆಯುತ್ತಿದ್ದೇವೆ. ಸಮುದಾಯ ಬೀಜ ಬ್ಯಾಂಕ್ ಮಾಡಿಕೊಂಡಿದ್ದೇವೆ. ಎಲ್ಲ ಭತ್ತದ ತಳಿ, ದ್ವಿದಳ ಧಾನ್ಯ, ಸಿರಿಧಾನ್ಯಗಳು, ದೇಸಿ ತಳಿಗಳು ಅಲ್ಲಿ ಸಿಗುತ್ತವೆ. ಆಸಕ್ತಿ ಇರುವ ರೈತರಿಗೆ ಮಾರಾಟ ಮಾಡುತ್ತಿದ್ದೇವೆ" ಎನ್ನುತ್ತಾರೆ ರೈತ ಶಂಕರ ಹನುಮಂತ ಲಂಗಟಿ ಅವರು.
ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಮಾತನಾಡಿ, "ನೂರಾರು ವರ್ಷದ ಹಿಂದಿನ ಜವಾರಿ ದೇಸಿ ತಳಿಗಳನ್ನು ಬೆಳೆಯುತ್ತೇವೆ. ನಶಿಸುತ್ತಿರುವ 22 ದೇಸಿ ತಳಿಗಳನ್ನು ಉಳಿಸಿಕೊಂಡು ಬಂದಿದ್ದೇವೆ. ಕಡ್ಡದನ್ನಿ ಜೋಳ ಎಲ್ಲೂ ಸಿಗುವುದಿಲ್ಲ. ಜವಾರಿ ತಳಿಗಳು ಅಲ್ಪಾವಧಿಯಲ್ಲಿ ಬರುವುದಿಲ್ಲ. ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತದೆ. ಜವಾರಿ ತಳಿಗಳು ದೀರ್ಘಾವಧಿಯಲ್ಲಿ ಅಂದರೆ 5 ತಿಂಗಳಿಗೆ ಕಡಿಮೆ ಬರುವುದಿಲ್ಲ. ಜವಾರಿ ಜೋಳ ತಿಂದು ಪೂರ್ವಿಕರು ನೂರು ವರ್ಷಕ್ಕೆ ಹೆಚ್ಚು ಬದುಕಿದ್ದಾರೆ. ನಾವು ಬೆಳೆದು ಬೇರೆ ರೈತರಿಗೂ ಬೀಜ ಮಾರಾಟ ಮಾಡುತ್ತೇವೆ. ಈ ತಳಿಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಮಾರುಕಟ್ಟೆಯೂ ಇದೆ " ಎಂದು ಹೇಳಿದ್ದಾರೆ.
ದೇಸಿ ತಳಿಗಳ ಸಂರಕ್ಷಣೆಗೆ ಸರ್ಕಾರವೂ ಒತ್ತು : ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಹಾಗೂ ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸುವ ಉದ್ದೇಶ ಸರ್ಕಾರ ಹೊಂದಿದ್ದು, ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದ ಅನುಷ್ಠಾನದ ಮಾರ್ಗಸೂಚಿ ಕುರಿತು ಕೃಷಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ನಲ್ಲಿ ಸಭೆ ನಡೆಸಿ ಅಂತಿಮಗೊಳಿಸಲಾಗಿತ್ತು. ರಾಜ್ಯದಲ್ಲಿ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಯನ್ನು ಹೊರಡಿಸಿದೆ.
ರೈತರ ಸಾಂಪ್ರದಾಯಿಕ, ಪರಂಪರೆ, ಜಾನಪದ ಪ್ರಭೇದಗಳು ಎಂದು ಕರೆಯಲ್ಪಡುವ ದೇಸಿ ತಳಿಗಳು, ಸ್ಥಳೀಯ ಅಥವಾ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಅಭಿವೃದ್ಧಿ/ ನಿರ್ವಹಿಸಲ್ಪಡುವ ತಳಿಗಳಾಗಿವೆ. ದೇಸಿ ತಳಿಗಳು ಹೊಂದಿರುವ ವಿಶಿಷ್ಟ ಗುಣಲಕ್ಷಣಗಳು ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ಕೆಲವೇ ರೈತರು ದೇಸಿ ತಳಿ ಕೃಷಿ ಮಾಡುವುದನ್ನು ಮುಂದುವರೆಸುತ್ತಾರೆ.
ರೈತರು ತಲೆಮಾರುಗಳಿಂದ ಬೆಳೆದ ಸಾಂಪ್ರದಾಯಿಕ ಪ್ರಭೇದಗಳು, ಸ್ಥಳೀಯ ಕೃಷಿ ಪದ್ಧತಿ ಮತ್ತು ಪ್ರದೇಶಕ್ಕೆ ಹೊಂದಿಕೊಂಡಿರಬೇಕು. ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಸಾಮೆ, ಊದಲು, ಕೊರಲೆ, ಹಾರಕ, ಬರಗು ಸೇರಿದಂತೆ ಕನಿಷ್ಠ 500 ದೇಸಿ ತಳಿಗಳ ಗುರುತಿಸುವಿಕೆ ಮತ್ತು ಸಂರಕ್ಷಣೆ ಮಾಡುವುದು, ಬೀಜ ಬ್ಯಾಂಕ್ನಲ್ಲಿ ಸುಮಾರು 500 ದೇಸಿ ತಳಿಗಳ ಸಂಗ್ರಹಣೆ, ಬೀಜ ಪೂರೈಕೆಗಾಗಿ 5 ದೇಸಿ ತಳಿಗಳ ಮೌಲ್ಯೀಕರಣ ಮತ್ತು ಬಿಡುಗಡೆ. 15 ದೇಸಿ ತಳಿ ಉತ್ಪನ್ನಗಳ ಮಾರಾಟ ಮಳಿಗೆಗಳ ಸ್ಥಾಪನೆ, ಬರ, ರೋಗ/ಕೀಟ ನಿರೋಧಕತೆ, ಔಷಧಿಯ ಮೌಲ್ಯ, ರುಚಿ, ಸುವಾಸನೆ ಮುಂತಾದ ವಿಶೇಷ ಗುಣಲಕ್ಷಣಗಳನ್ನೊಳಗೊಂಡ ದೇಸಿ ತಳಿಗಳ ದಾಖಲೀಕರಣ. ನಗರ ಮತ್ತು ಗ್ರಾಮೀಣ ಜನಸಾಮಾನ್ಯರಿಗೆ ಸಾವಯವ ಮತ್ತು ಹೆಚ್ಚಿನ ಪೌಷ್ಠಿಕಾಂಶದ ಮೌಲ್ಯದ ದೇಸಿ ತಳಿಗಳ ಲಭ್ಯತೆ ಗುರಿ ಹೊಂದಿದೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ವಾಣಿಜ್ಯ, ಸಾವಯವ, ಸಿರಿಧಾನ್ಯ ಮೇಳದ ವಿಶೇಷತೆ ಏನು? - MILLET FAIR