ಬೆಂಗಳೂರು: ಗ್ರಾಹಕರಿಂದ ಬೇಡಿಕೆ ಇರುವ ದ್ವಿಚಕ್ರ ವಾಹನಗಳನ್ನು ಕದ್ದು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಚಾಲಾಕಿ ಕಳ್ಳರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಷಹಬಾಜ್ ಖಾನ್ ಹಾಗೂ ಓಂ ಬಂಧಿತ ಆರೋಪಿಗಳು. ಬಂಧಿತರಿಂದ 12.5 ಲಕ್ಷ ಮೌಲ್ಯದ ಒಟ್ಟು 13 ವಿವಿಧ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಲಾಸಿ ಜೀವನಕ್ಕಾಗಿ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಆರೋಪಿಗಳು, 15 ರಿಂದ 20 ಸಾವಿರಕ್ಕೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದ ಬಳಿಕ ಒಬ್ಬರ ಮೂಲಕ ಮತ್ತೊಬ್ಬರು ಎಂಬಂತೆ ಗ್ರಾಹಕರ ಪರಿಚಯವಾಗುತ್ತಿತ್ತು. ಈ ವೇಳೆ ಕಡಿಮೆ ಬೆಲೆಗೆ ಯಾವ ದ್ವಿಚಕ್ರ ವಾಹನ ಬೇಕಾದರೂ ಕೊಡಿಸುವುದಾಗಿ ಆರೋಪಿಗಳು ಭರವಸೆ ನೀಡುತ್ತಿದ್ದರು. ಬಳಿಕ ಗ್ರಾಹಕರಿಂದ ಬೇಡಿಕೆಯಿರುವ ದ್ವಿಚಕ್ರ ವಾಹನಗಳನ್ನೇ ಟಾರ್ಗೆಟ್ ಮಾಡಿಕೊಂಡು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ನಂತರ ಅವುಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು.
ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಮಾಸ್ಕ್, ಗ್ಲೌಸ್ ಧರಿಸಿ ಮನೆಗಳವು ಮಾಡುತ್ತಿದ್ದ ಐವರ ಬಂಧನ: ಮಾಸ್ಕ್, ಗ್ಲೌಸ್ ಧರಿಸಿ ಕ್ಷಣಮಾತ್ರದಲ್ಲಿ ಬೀಗ ಒಡೆದು ಮನೆಗಳ್ಳತನ ಮಾಡುತ್ತಿದ್ದ ಐವರು ಕಳ್ಳರ ಗುಂಪನ್ನು ಆರ್.ಆರ್.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೈದೀಪ್, ಚಂದನ್, ಸತೀಶ್, ದೀಪಕ್, ಹಾಗೂ ಮಿಥುನ್ ಬಂಧಿತರು. ಆರೋಪಿಗಳಿಂದ 10.18 ಲಕ್ಷ ಮೌಲ್ಯದ 103 ಗ್ರಾಂ ಚಿನ್ನ 2 ಕೆ.ಜಿಗೂ ಅಧಿಕ ಬೆಳ್ಳಿ ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ಅವುಗಳನ್ನು ಬಳಸಿ ಬೇರೆ ಬೇರೆ ಏರಿಯಾಗಳಲ್ಲಿ ಸುತ್ತಾಡಿ ಯಾರೂ ಇರದಿರುವ ಅಥವಾ ಕಳ್ಳತನಕ್ಕೆ ಸುಲಭವೆನಿಸುವಂತಹ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಬಳಿಕ ರಾತ್ರಿ ವೇಳೆ ಮಾಸ್ಕ್, ಗ್ಲೌಸ್ ಧರಿಸಿ ಬಂದು ಕೆಲವೇ ನಿಮಿಷಗಳಲ್ಲಿ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಇದೇ ರೀತಿ ಸೆಪ್ಟೆಂಬರ್ 17ರಂದು ಆರ್.ಆರ್.ನಗರ ವ್ಯಾಪ್ತಿಯ ಮನೆಯೊಂದರಲ್ಲಿ ಆರೋಪಿಗಳು ಕಳ್ಳತನ ಎಸಗಿರುವುದು ಸಿಸಿಟಿವಿಯಲ್ಲಿ ಸರೆಯಾಗಿತ್ತು.
ಮನೆ ಮಾಲೀಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಆರ್.ಆರ್.ನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನ ಕುಖ್ಯಾತ ಕಳ್ಳ ಎಸ್ಕೇಪ್ ಕಾರ್ತಿಕ್‌ನ ಸಹಚರರು ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಏಕಕಾಲದಲ್ಲಿ 6 ಮನೆಗಳಲ್ಲಿ ಕಳ್ಳತನ: ಬೆಚ್ಚಿಬಿದ್ದ ಉಡುಪಿ ಜನತೆ - Theft In Houses