ಧಾರವಾಡ: ಇಲ್ಲಿನ ತಹಶೀಲ್ದಾರ್ ಕಚೇರಿಯ ಮಹಿಳಾ ಸಿಬ್ಬಂದಿಯ ಬ್ಯಾಗ್ ಕಳ್ಳತನವಾಗಿದೆ. ಕಚೇರಿಯಲ್ಲಿ ಕೆಲಸವಿದ್ದಂತೆ, ಕೈಯಲ್ಲಿ ಕೆಲವು ಕಾಗದ ಪತ್ರಗಳನ್ನು ಹಿಡಿದುಕೊಂಡು ಬಂದಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಆರೋಪಿಯ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಎಫ್‌ಡಿಸಿ ಆಗಿ ಕೆಲಸ ಮಾಡುತ್ತಿರುವ ಜಯಶ್ರೀ ಕಟ್ಟಿಮನಿ ಎಂಬವರ ಬ್ಯಾಗ್ ಕಳ್ಳತನವಾಗಿದೆ. ಕಚೇರಿಯ ಕೆಲವು ದಾಖಲೆಪತ್ರಗಳು, ಕೋರ್ಟ್ ಸಂಬಂಧಿತ ದಾಖಲೆಗಳು ಹಾಗು ಸುಮಾರು 3,000 ರೂ. ನಗದು, ಎಟಿಎಂ, ಇನ್ನಿತರೆ ದಾಖಲೆಗಳು ಬ್ಯಾಗ್ನಲ್ಲಿದ್ದವು ಎಂದು ಅವರು ತಿಳಿಸಿದ್ದಾರೆ.
ಬ್ಯಾಗ್ ಕಾಣಿಸದೇ ಇದ್ದಾಗ ಎಲ್ಲೆಡೆ ಹುಡುಕಾಡಿದ ಸಿಬ್ಬಂದಿ, ಕೊನೆಗೆ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಆಗ ಕಳ್ಳತನವಾಗಿರುವುದು ತಿಳಿದು ಬಂದಿದೆ.
ವಿದ್ಯುತ್ ಕಡಿತವಾಗಿದ್ದ ವೇಳೆ ತನ್ನ ರೈನ್ ಜಾಕೆಟ್ನಲ್ಲಿ ಬ್ಯಾಗ್ ಬಚ್ಚಿಟ್ಟುಕೊಂಡು ಆರೋಪಿ ಪರಾರಿಯಾಗಿದ್ದಾನೆ. ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಮಂಗಳೂರು: ಮನೆಮಂದಿ ಇದ್ದಾಗಲೇ ಕಿಟಕಿ ಸರಳು ತುಂಡರಿಸಿ ಒಳನುಗ್ಗಿದ ಕಳ್ಳರು - House Theft