ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಮೇಯರ್, ಉಪಮೇಯರ್ಗೆ ನೀಡಲಾದ ಕಾರುಗಳನ್ನು ಕೆಲವೇ ಗಂಟೆಗಳಲ್ಲಿ ವಾಪಸ್ ನೀಡಬೇಕಾಯಿತು.
ಗುರುವಾರ ಮೇಯರ್, ಉಪಮೇಯರ್ ಚುನಾವಣೆ ನಡೆದು ಮೇಯರ್ ಆಗಿ ಮನೋಜ್ ಕೋಡಿಕಲ್ ಮತ್ತು ಉಪಮೇಯರ್ ಭಾನುಮತಿ ಮಧ್ಯಾಹ್ನ 1.45ಕ್ಕೆ ಅಧಿಕಾರ ಸ್ವೀಕರಿಸಿದರು. ಆದರೆ ವಿಧಾನ ಪರಿಷತ್ ಚುನಾವಣೆಗೆ 3.45ಕ್ಕೆ ನೀತಿ ಸಂಹಿತೆ ಆದೇಶ ಬಂದಿದೆ. ಆದ ಕಾರಣ ಮೇಯರ್, ಉಪಮೇಯರ್ ಅವರಿಗೆ ನೀಡಲಾದ ಕಾರನ್ನು ಕೂಡಲೇ ವಾಪಸ್ ನೀಡಬೇಕಾಯಿತು.
ನೂತನ ಮೇಯರ್, ಉಪಮೇಯರ್ ಅಧಿಕಾರ ಸ್ವೀಕರಿಸಿದ ಬಳಿಕ ಪಾಲಿಕೆ ಸಭಾಂಗಣದಲ್ಲಿ ಅಭಿನಂದನಾ ಸಭೆ ಮುಗಿಸಿ ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ಆದರೆ ಅದಾದ ಕೆಲ ಹೊತ್ತಿನಲ್ಲಿ ಕಾರು ಹಿಂಪಡೆಯಲಾಗಿದೆ. ಹೀಗಾಗಿ, ಮೇಯರ್ ಕೇವಲ ಅರ್ಧ ಗಂಟೆ ಮಾತ್ರ ಕಾರು ಉಪಯೋಗಿಸಲು ಅವಕಾಶ ಸಿಕ್ಕಿತು.
ಪಾಲಿಕೆಯ ಐದು ವರ್ಷದಲ್ಲಿ ಕೊನೆಯ ಅವಧಿಯ ಮೇಯರ್ ಚುನಾವಣೆ ಇದಾಗಿದೆ. ಆರಂಭದಲ್ಲಿ ಮೇಯರ್ ಆಯ್ಕೆ ವೇಳೆ ಮೀಸಲಾತಿಯ ಸಮಸ್ಯೆ ಇದ್ದ ಕಾರಣ ಆರು ತಿಂಗಳು ತಡವಾಗಿ ಚುನಾವಣೆ ನಡೆದಿತ್ತು. ಆ ಬಳಿಕ ಎಲ್ಲ ಮೇಯರ್, ಉಪಮೇಯರ್ ಒಂದು ವರ್ಷ ಅಧಿಕಾರ ನಡೆಸಿದರು. ಆದರೆ ಕೊನೆಯ ಅವಧಿಯ ಮೇಯರ್ಗೆ ಕೇವಲ 193 ದಿನ ಸಿಕ್ಕಿತು. ಇದೀಗ ನೀತಿ ಸಂಹಿತೆ ಬಂದಿರುವುದರಿಂದ ಕೇವಲ 154 ದಿನಗಳು ಮಾತ್ರ ಅಧಿಕಾರ ನಡೆಸಲು ಅವಕಾಶವಿದೆ.
'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಮೇಯರ್ ಮನೋಜ್ ಕೋಡಿಕಲ್, "ಪಾಲಿಕೆಯಲ್ಲಿ ಚುನಾವಣೆ ನಡೆದು, ಆ ಬಳಿಕ ಕಾರ್ಯಕ್ರಮ ಮುಗಿಸಿ ಊಟಕ್ಕೆ ಮನೆಗೆ ತೆರಳಲು ಕಾರನ್ನು ಬಳಸಿದ್ದೆ. ಆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಆ ಕಾರಣದಿಂದ ಕಾರು ವಾಪಸ್ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಕೀಯಕ್ಕೆ ಸೇವೆಗಾಗಿ ಬನ್ನಿ, ನಿಮ್ಮ ಲಾಭಕ್ಕಾಗಿ ಅಲ್ಲ: ಸಂತೋಷ್ ಹೆಗ್ಡೆ - Santosh Hegde