ಮೈಸೂರು: ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿರುವುದು ಗೊತ್ತಿರುವ ಸಂಗತಿ. ಟಿಕೆಟ್ ಸಿಕ್ಕ ನಂತರ ಈ ಟಿವಿ ಭಾರತ್ ಜೊತೆ ಮಾತನಾಡಿದ ಎಂ.ಲಕ್ಷ್ಮಣ್ ಅವರು, ಈ ಬಾರಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜ vs ಸಾಮಾನ್ಯ ಪ್ರಜೆ ನಡುವೆ ಸ್ಪರ್ಧೆ ಇದೆ. ಜನರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಅಡಿ ನಮಗೆ ಈ ಬಾರಿ ಆಶೀರ್ವಾದ ಮಾಡುತ್ತಾರೆ ಎಂದು ಎಂ.ಲಕ್ಷ್ಮಣ್ ಈ ಟಿವಿ ಭಾರತ್ ಸಂದರ್ಶನದಲ್ಲಿ ವಿವರಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮೊದಲ ಸುದ್ದಿಗೋಷ್ಠಿಯನ್ನ ನಡೆಸಿ ನಂತರ ಈಟಿವಿ ಭಾರತ್ ಜೊತೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಟಿಕೆಟ್ ಪ್ರಕ್ರಿಯೆ ಹೇಗೆ ನಡೆಯಿತು. ಬಿಜೆಪಿ ಅಭ್ಯರ್ಥಿಯ ಬಗ್ಗೆ ಪ್ರತಿಕ್ರಿಯೆ ಏನು ? ಈ ಭಾರಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವ ಅವಕಾಶದ ಬಗ್ಗೆ ಹಾಗೂ 47 ವರ್ಷಗಳ ನಂತರ ಒಕ್ಕಲಿಗರ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಈ ಭಾರಿ ಗೆಲ್ಲುವ ಅವಕಾಶ ನನಗೆ ಹೆಚ್ಚು ಇದೆ ಎಂದು ಲಕ್ಷ್ಮಣ್ ಸಂದರ್ಶನದಲ್ಲಿ ವಿವರಿಸಿದ್ದರು.
ಟಿಕೆಟ್ ಪ್ರಕ್ರಿಯೆ ನಡೆದಿದ್ದು ಹೀಗೆ?: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳು 5 ವರ್ಷ ಪಕ್ಷಕ್ಕೆ ಕೆಲಸ ಮಾಡಿರಬೇಕು. ಜನರಿಗೆ ಪರಿಚಿತರಾಗಿರಬೇಕು. ಇವೆಲ್ಲಾ ಮಾನದಂಡಗಳ ಆಧಾರದ ಮೇಲೆ 16 ಜನ ಅಪ್ಲಿಕೇಶನ್ ಹಾಕಿದರು. ಅದರಲ್ಲಿ 4 ಜನ ಶಾರ್ಟ್ ಲಿಸ್ಟ್ ಮಾಡಿದ್ದರು. ಫೈನಲ್ ಅಲ್ಲಿ ಹೈಕಮಾಂಡ್ಗೆ ನನ್ನ ಮತ್ತು ವಿಜಯಕುಮಾರ್ ಅವರ ಹೆಸರುಗಳನ್ನು ಸೂಚಿಸಿತ್ತು. ಅಂತಿಮವಾಗಿ ಮಾನ್ಯ ಮುಖ್ಯಮಂತ್ರಿ ಅವರು ವಿಜಯಕುಮಾರ್ ಅವರ ಮನವೊಲಿಸಿ ನನ್ನಗೆ ಟಿಕೆಟ್ ಕಲ್ಪಿಸಿಕೊಟ್ಟರು ಎಂದರು.
ಯದುವೀರ್ ಬಗ್ಗೆ ಹೇಳಿದ್ದೇನು: ನಮಗೆ ಯದುವೀರ್ ಅಭ್ಯರ್ಥಿಯಾಗಿರುವುದರ ಬಗ್ಗೆ ಯಾವುದೇ ಅಭ್ಯಂತರವಿಲ್ಲ. ಬಿಜೆಪಿ ಅವರನ್ನು ಕರೆದುಕೊಂಡು ಬಂದು ಅಭ್ಯರ್ಥಿ ಮಾಡಿದ್ದಾರೆ. ಅವರು ಮಹಾರಾಜರ ದತ್ತುಪುತ್ರ. ನಾನೊಬ್ಬ ಸಾಮಾನ್ಯ ಪ್ರಜೆ. ಜನಸಾಮಾನ್ಯರಿಗೆ 24×7 ಇರುವ ವ್ಯಕ್ತಿ . ನಾನು ಪುಟ್ಪಾತ್ ಮೇಲೆ ಇರುತ್ತೇನೆ. ರೋಡ್ನಲ್ಲಿ ಊಟ ಮಾಡುತ್ತೇನೆ. ಬಸ್, ಟ್ರೈನ್ ಅಷ್ಟೇ ಏಕೆ ನಡೆದುಕೊಂಡು ಹೋಗುತ್ತೇನೆ,. ನಿಮ್ಮ ಮನೆ ಕಾಯುವ ವ್ಯಕ್ತಿ ಬೇಕಾ ಅಥವಾ ನೀವೇ ಹೋಗಿ ಬೇರೇ ಅವರ ಮನೆ ಕಾಯುವ ವ್ಯಕ್ತಿ ಬೇಕಾ ಎಂದು ಜನರೇ ತೀರ್ಮಾನ ಮಾಡಲಿ ಎಂದರು.
ನಾವು ಕಾಂಗ್ರೆಸ್ ಪಕ್ಷದಿಂದ ಅಷ್ಟು ಕಾರ್ಯಕ್ರಮ ಕೊಟ್ಟಿದ್ದೇವೆ. ಅದು ಶೇಕಡಾ 94ರಷ್ಟು ಜನರಿಗೆ ತಲುಪಿದೆ. ಈ ಯೋಜನೆ ಮುಂದುವರಿಯಬೇಕಾದರೆ ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕು. ಇಲ್ಲ ಎಂದರೆ ಬಿಜೆಪಿ ಪಕ್ಷ ಗೆದ್ದರೆ ಈ ಎಲ್ಲಾ ಯೋಜನೆಯನ್ನು ನಿಲ್ಲಿಸಿ ಬಿಡುತ್ತಾರೆ. ಯಾವ ಗ್ಯಾರಂಟಿ ಸ್ಕೀಮ್ ಕೊಡುವುದಿಲ್ಲ. ದಯಮಾಡಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಮಾಡಿಕೊಡಿ. ನಾವು ಏನು ಗ್ಯಾರಂಟಿ ಸ್ಕೀಮ್ ಕೊಟ್ಟಿದ್ದೇವೆ ಆ ಗ್ಯಾರಂಟಿ ಸ್ಕೀಮ್ಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.
ಕಾಂಗ್ರೆಸ್ ಗೆಲ್ಲುವ ಅವಕಾಶ ಹೆಚ್ಚು: ಕಳೆದ 2 ಬಾರಿ ಗೆದಿದ್ದು ಬೇರೆ ಬೇರೆ ಕಾರಣಗಳಿಂದ. ಈ ಬಾರಿ 8 ಕ್ಷೇತ್ರದಲ್ಲಿ 5 ಕ್ಷೇತ್ರದಲ್ಲಿ ಕಾಂಗ್ರೆಸ್, 2 ಕ್ಷೇತ್ರದಲ್ಲಿ ಜೆಡಿಎಸ್, 1 ಕ್ಷೇತ್ರದಲ್ಲಿ ಬಿಜೆಪಿ ಇದೆ. ಇವಾಗ ಬಿಜೆಪಿ ಜೆಡಿಎಸ್ ಮೈತ್ರಿ ಹಳಸಿ ಹೋಗಿದೆ. ಅವರಲ್ಲಿ ಒಗ್ಗಟ್ಟು ಇಲ್ಲ. ಜೆಡಿಎಸ್ ಅವರನ್ನ ಕರೆದುಕೊಂಡು ಬಂದು ಮೋಸ ಮಾಡಿದೆ ಎಂದು ಈಗಾಗಲೇ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. 2 ಸೀಟ್ಗಳಿಗೊಸ್ಕರ ಬಿಜೆಪಿ ಜೊತೆ ಮೈತ್ರಿ ಆಗಬೇಕಾ, ಕೆಟ್ಟು ಹೋದೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರಿಗೆ ಮಾನಸಿಕವಾಗಿ ಹಿಂಸೆ ಕೊಡುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಹೇಳಿದರು.
47 ವರ್ಷಗಳ ನಂತರ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್: 1977ರ ನಂತರ ಈ ಭಾಗದಲ್ಲಿ ಮೈಸೂರು ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ಸಿಕ್ಕಿದೆ. 2024 ರಲ್ಲಿ ಸಿದ್ದರಾಮಯ್ಯ ಅವರು ಮನಸ್ಸು ಮಾಡಿ ಒಕ್ಕಲಿಗ ಸಮುದಾಯದವನಾದ ನಂಗೆ ಟಿಕೆಟ್ ಕೊಟ್ಟಿದ್ದಾರೆ. ಸಮುದಾಯ ಏನು ಅಪೇಕ್ಷೆ ಪಡದೇ ಇದ್ದರೂ, ಆ ಅಪೇಕ್ಷೆ ಮೇರೆಗೆ ಪ್ರತಾಪ್ ಸಿಂಹ ಅವರನ್ನ ಗೆಲ್ಲಿಸಿಕೊಟ್ಟಿದರು. ಇವಾಗ ಅದೇ ಫಾರ್ಮುಲಾ ನನಗೂ ಅನ್ವಯಿಸಬೇಕು ಅಲ್ಲವೇ. ನಾನೇನು ಒಂದು ಜಾತಿಯಲ್ಲಿ ಗುರುತಿಸಿಕೊಂಡಿಲ್ಲ. ನಾನು ಒಕ್ಕಲಿಗ ಸಮುದಾಯ ಆಗಿದ್ದರೂ ಎಲ್ಲರ ಜೊತೆ ಇದ್ದೀನಿ. ಮೈಸೂರು ಕೊಡಗು ಎಲ್ಲಾ 21 ಲಕ್ಷ ಮತದಾರರು ಕೂಡ ಸಂಬಂಧಿಕರೇ. ನಾನು ಎಲ್ಲಾ ಸಮುದಾಯದ ಜೊತೆ ಇರುವ ವ್ಯಕ್ತಿ. ಎಲ್ಲಾ ಸಮುದಾಯದ ಅವರ ಜೊತೆ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ.
ಪ್ರತಾಪ್ ಸಿಂಹ ಬಗ್ಗೆ ಹೇಳಿದ್ದೇನು?: ಹಿಂದೆ ಇದ್ದ ಸಂಸದರಂತೆ ಕಿಡಿ ಹಚ್ಚುವ ಕೆಲಸವನ್ನ ಮಾಡುವುದಿಲ್ಲ. ಹಿಂದೂ, ಮುಸ್ಲಿಂ, ಒಕ್ಕಲಿಗರು, ಲಿಂಗಾಯತರು, ದಲಿತರು ಎಂದು ವಿಘಟನೆ ಮಾಡುವ ಕೆಲಸವನ್ನು ನಾವು ಮಾಡುವುದಿಲ್ಲ. ನಿನ್ನೆ ನಂಗೆ ಟಿಕೆಟ್ ಅನೌನ್ಸ್ ಆಗಿದೆ. ಇವತ್ತಿಂದ ಪ್ರಚಾರ ಶುರು ಮಾಡಿದ್ದೇನೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಈ ಟಿವಿ ಭಾರತ್ಗೆ ಹೇಳಿದರು.