ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅನುಮೋದನೆ ಪಡೆದ ಯೋಜನೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನು ತಡೆಯುವುದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಶಶಿಕುಮಾರ್ ಎಂಬುವರು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಯ ಮಂಜೂರಾತಿ ಪಡೆದಿಲ್ಲ. ಜೊತೆಗೆ, ನಿಯಮಗಳನ್ನು ಉಲ್ಲಂಘಿಸಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಿ ಕುಶಾಲ್ ರಾಮರೆಡ್ಡಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ವಿಭಾಗೀಯ ಪೀಠ, ಈ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಹೈಕೋರ್ಟ್ ಮಾರ್ಗಸೂಚಿಗಳು:
- ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳ ಅನುಮೋದನೆ ಮಂಜೂರು ಮಾಡುವುದಕ್ಕೂ ಮುನ್ನ ಕಟ್ಟಡದ ಮಾಲೀಕರು, ಆರ್ಕಿಟೆಕ್‌ಗಳು, ಕಟ್ಟಡಗಳ ನಿರ್ಮಾಣ ಮೇಲ್ವಿಚಾರ ಸಂಪೂರ್ಣ ಮಾಹಿತಿ, ವಿಳಾಸ ಪಡೆದುಕೊಳ್ಳಬೇಕು. ಜೊತೆಗೆ, ಅವರ ಇ - ಮೇಲ್ ವಿಳಾಸ, ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಫ್ ಸಂಖ್ಯೆಗಳನ್ನು ಪಡೆಯಬೇಕು.
- ಕಟ್ಟಡ ನಿರ್ಮಾಣ ಸಂಬಂಧ ಯೋಜನೆಗಳನ್ನು ಮಂಜೂರು ಮಾಡಿದ ಬಳಿಕ ಪ್ರತಿ ತಿಂಗಳು ಮಾಹಿತಿ ದಾಖಲಿಸಿಕೊಳ್ಳಬೇಕು. ಜೊತೆಗೆ, ಕಟ್ಟಡ ನಿರ್ಮಾಣದ ವಿವಿಧ ಹಂತಗಳಲ್ಲಿ ಮಾಲೀಕರು ಬಿಬಿಎಂಪಿಗೆ ಮಾಹಿತಿ ನೀಡಬೇಕು.
- ಮಾಲೀಕರು, ಆರ್ಕಿಟೆಕ್‌ಗಳು ಮತ್ತು ಮೇಲ್ವಿಚಾರಕರು ಕಟ್ಟಡದ ಅಡಿಪಾಯ ಪ್ರಾರಂಭವಾದ ದಿನದಿಂದ ಪೂರ್ಣಗೊಳ್ಳುವವರೆಗೂ ಅಂದರೆ, ಪಿಲ್ಲರ್‌ಗಳ ನಿರ್ಮಾಣ ಮತ್ತು ಪ್ರತಿ ಮಹಡಿಯ ಛಾವಣಿ ಪೂರ್ಣಗೊಳ್ಳುತ್ತಿದ್ದ ಪ್ರತಿ ಹಂತದಲ್ಲಿಯೂ ಪಾಲಿಕೆಗೆ ಪ್ರಮಾಣ ಪತ್ರಗಳನ್ನು ಸಲ್ಲಿಸುತ್ತಿರಬೇಕು.
- ಕಟ್ಟಡ ಯಾವ ಹಂತದಲ್ಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಮಾಣ ಪತ್ರ ಸಲ್ಲಿಸಬೇಕು.
- ನಿಯತಕಾಲಿಕವಾಗಿ ತಪಾಸಣೆ ನಡೆಸಿ ಸಂಬಂಧಪಟ್ಟ ವಾರ್ಡ್ ಅಧಿಕಾರಿ 30 ದಿನಗಳಿಗೊಮ್ಮೆ ತಪಸಾಣೆ ನಡೆಸಬೇಕು. ಈ ಸಂದರ್ಭದಲ್ಲಿ ಯೋಜನೆ ಉಲ್ಲಂಘನೆಯಾಗಿರುವ ಕುರಿತಂತೆ ವಿವರಣೆ ದಾಖಲಿಸಿ ವರದಿಯನ್ನು ಸಿದ್ದಪಡಿಸಿ ಸಲ್ಲಿಸಬೇಕು.
- ಕಟ್ಟಡ ನಿರ್ಮಾಣದಲ್ಲಿ ಅನುಮೋದನೆ ಪಡೆದಿರುವ ಸಂಬಂಧದ ಯೋಜನೆ ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಬಿಬಿಎಂಪಿ ಕಟ್ಟಡದ ಮಾಲೀಕರು ಅಥಾವ ಬಿಲ್ಡರ್‌ಗಳಿಗೆ ನೋಟಿಸ್ ನೀಡಬೇಕು. ಆಗಿರುವ ಉಲ್ಲಂಘನೆಯನ್ನು ಮನವರಿಕೆ ಮಾಡಬೇಕು. ಅತಂತ ಉಲ್ಲಂಘಿತ ಭಾಗವನ್ನು ತೆರವುಗೊಳಿಸಬೇಕು.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯೊಂದಿಗೆ ದತ್ತಾಂಶವನ್ನು ಕ್ರೋಢಿಕರಿಸಬೇಕು. ಅಂತಹ ಕಟ್ಟಡಕ್ಕೆ ವಿದ್ಯುತ್ ಮತ್ತು ನೀರು ಸರಬರಾಜಿಗೆ ಅನುಮತಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಜಲಮಂಡಳಿ ಮತ್ತು ಬೆಸ್ಕಾಂ ಬಿಬಿಎಂಪಿಗೆ ಮಾಹಿತಿ ಒದಗಿಸಬೇಕು.
- ನೀರು ಸರಬರಾಜು, ವಿದ್ಯುತ್ ಸಂಪರ್ಕಕ್ಕೆ ಸಂಬಂಧ ಉಲ್ಲಂಘನೆಗಳ ಕುರಿತಂತೆ ಜಾರಿ ಮಾಡಿರುವ ನೋಟಿಸ್‌ಗಳು, ಈ ಸಂಬಂಧ ತೆಗೆದುಕೊಂಡ ಕ್ರಮಗಳ ಕುರಿತಂತೆ ಬಿಬಿಎಂಪಿ ತನ್ನ ವೆಬ್ಸೈಟ್ನಲ್ಲಿ ದಾಖಲಿಸಬೇಕು. ಈ ಸಂಬಂಧ ಎಲ್ಲ ದಾಖಲೆಗಳನ್ನು ಎಲ್ಲ ಅಧಿಕಾರಿಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ