ಬೆಂಗಳೂರು : ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರನ್ನಾಗಿ ಡಾ. ಅನಿಲ್ ಖುರಾನಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ 2021ರ ಜುಲೈ 5ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಅಲ್ಲದೇ, ರಾಷ್ಟ್ರೀಯ ಹೋಮಿಯೋಪತಿ ಆಯೋಗಕ್ಕೆ ಹೊಸದಾಗಿ ಅಧ್ಯಕ್ಷರನ್ನು ನೇಮಕ ಪ್ರಕ್ರಿಯೆ ಪ್ರಾರಂಭಿಸುವಂತೆ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಡಾ. ಅನಿಲ್ ಖುರಾನಾ ಅವರನ್ನು ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಆಯುಷ್ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಅಮರಗೌಡ ಎಲ್. ಪಾಟೀಲ್ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಎಸ್ ಸಂಜಯಗೌಡ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅಲ್ಲದೇ, ಆಯೋಗದ ಅಧ್ಯಕ್ಷರಾಗಲು ಹೋಮಿಯೋಪತಿ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷದ ಸೇವಾನುಭವ ಹೊಂದಿರಬೇಕು ಎಂಬ ನಿಯಮವಿದೆ. ಆ 20 ವರ್ಷಗಳಲ್ಲಿ ಕನಿಷ್ಠ 10 ವರ್ಷಗಳ ಕಾಲ ಹೋಮಿಯೋಪತಿ ಮತ್ತಿತರ ಶಿಕ್ಷಣಕ್ಕೆ ಸಂಬಂಧಿಸಿದ ಅಭಿವೃದ್ಧಿ, ಬೆಳವಣಿಗೆ, ಆರೋಗ್ಯ ಸೇವೆ ಒದಗಿಸುವ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಬೇಕು ಎಂದು ರಾಷ್ಟ್ರೀಯ ಹೋಮಿಯೋಪತಿ ಆಯೋಗ ಕಾಯ್ದೆ- 2020ರ ಸೆಕ್ಷನ್4(2)ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಕಾಯ್ದೆ ಅನ್ವಯ ಡಾ. ಖುರಾನಾ ಅವರು ಅಂತಹ ಸೇವಾ ಅನುಭವ ಹೊಂದಿಲ್ಲ ಮತ್ತು ಇಲಾಖಾ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿಲ್ಲ. ಹಾಗಾಗಿ, ಅವರ ನೇಮಕಾತಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿರುವ ನ್ಯಾಯಪೀಠ, ನೇಮಕಾತಿಯನ್ನು ರದ್ದುಪಡಿಸಿ ಆದೇಶಿಸಿದೆ. ಜತೆಗೆ, ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರ ನೇಮಕಾತಿಗೆ ಕಾಯ್ದೆ ಪ್ರಕಾರ ಹೊಸದಾಗಿ ಪ್ರಕ್ರಿಯೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ, ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಮೆಡಿಕಲ್ ಅಸೆಸ್‌ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್‌ನ ಅಧ್ಯಕ್ಷರನ್ನಾಗಿ ಡಾ. ಕೆ. ಆರ್. ಜನಾರ್ಧನ ನಾಯರ್ ಅವರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಡಾ. ಅಮರಗೌಡ ಎಲ್. ಪಾಟೀಲ್ ಸಲ್ಲಿಸಿದ್ದ ಮತ್ತೊಂದು ಪ್ರತ್ಯೇಕ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಪೀಠ, ಡಾ. ಜನಾರ್ಧನ ನಾಯರ್ ನೇಮಕಾತಿ ಕ್ರಮಬದ್ಧವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: 'ವಿದೇಶದಲ್ಲಿ ನೆಲೆಸಿರುವ ದಂಪತಿ ಭಾರತದ ಮಗು ದತ್ತು ಪಡೆಯಲು ಹೇಗ್ ಒಪ್ಪಂದದ ಅನುಸರಣೆ ಅಗತ್ಯ'