ಬೆಳಗಾವಿ: ಇಬ್ಬರು ಬಾಣಂತಿಯರಿಗೂ ಘಟಪ್ರಭಾ ನದಿಯ ಪ್ರವಾಹದ ಬಿಸಿ ತಟ್ಟಿದ್ದು, ತವರು ಮನೆಯ ಬದಲು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವ ದುಸ್ಥಿತಿ ಬಂದೊದಗಿದೆ. ಹೌದು, ಘಟಪ್ರಭಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿದುಬಂದ ಹಿನ್ನೆಲೆ ಗೋಕಾಕ್, ಮೂಡಲಗಿ ತಾಲೂಕಿನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮ ಭಾಗಶಃ ಮುಳುಗಡೆಯಾಗಿದೆ. ಮನೆಗಳು ನೀರಿನಲ್ಲಿ ಮುಳುಗಡೆ ಆಗಿದ್ದರಿಂದ ಇಬ್ಬರು ಬಾಣಂತಿಯರಿಗೆ ಸಂಕಷ್ಟ ಎದುರಾಗಿದೆ.
ಜನರಿಗೆ ಕಾಳಜಿ ಕೇಂದ್ರದಲ್ಲಿ ಉಳಿಯಲು ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದೆ. ಇಬ್ಬರು ಬಾಣಂತಿಯರಿಗೆ ಅಂಗನವಾಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವಡೇರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಯರನ್ನು ಆರೈಕೆ ಮಾಡಲಾಗುತ್ತಿದೆ. 20 ದಿನದ ಕಂದಮ್ಮಳೊಂದಿಗೆ ತಾಯಿ ಲಕ್ಷ್ಮಿ ಗಾಣಿಗೇರ, ಒಂದೂವರೆ ತಿಂಗಳ ಕಂದಮ್ಮಳೊಂದಿಗೆ ತಾಯಿ ಹಣಮವ್ವ ಸಣ್ಣಕ್ಕಿನ್ನವರ ಆಶ್ರಯ ಪಡೆದಿದ್ದಾರೆ.
ಕಳೆದ ಐದು ದಿನಗಳಿಂದ ಮಸಗುಪ್ಪಿ ಗ್ರಾಮವು ಮುಳುಗಡೆ ಆಗಿದ್ದು, ಕಾಳಜಿ ಕೇಂದ್ರದಲ್ಲಿ ಬಾಣಂತಿಯರ ತಂದೆ, ತಾಯಿ ಆಶ್ರಯ ಪಡೆದಿದ್ದಾರೆ. ಕಂದಮ್ಮಗಳ ಆರೈಕೆಗಾಗಿ ಅಂಗನವಾಡಿ ಕೇಂದ್ರಕ್ಕೆ ಅವರನ್ನು ಶಿಫ್ಟ್ ಮಾಡಲಾಗಿದೆ. ಹೆರಿಗೆಗಾಗಿ ತವರು ಮನೆಗೆ ಇಬ್ಬರು ಬಾಣಂತಿಯರು ಬಂದಿದ್ದರು. ಇದೇ ಸಮಯಕ್ಕೆ ಮನೆಗೆ ನೀರು ನುಗ್ಗಿದ್ದರಿಂದ ಪ್ರವಾಹದಲ್ಲಿ ಸಿಲುಕುವಂತಾಗಿದೆ. ಬಾಣಂತಿಯರ ಬಗ್ಗೆ ಜಿಲ್ಲಾಡಳಿತ ವಿಶೇಷ ಕಾಳಜಿಯನ್ನು ವಹಿಸಿದ್ದು, ಊಟ, ವೈದ್ಯಕೀಯ ವ್ಯವಸ್ಥೆ ಸೇರಿ ಎಲ್ಲ ರೀತಿಯ ಸೌಲಭ್ಯಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ.
ಓದಿ: ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ: ಹೀಗಿದೆ ಇಂದಿನ ನೀರಿನ ಮಟ್ಟ - Karnataka Dam Water Level