ದೇವನಹಳ್ಳಿ: ಕೇಂದ್ರ ಸರ್ಕಾರದ ಹಣಕಾಸು ಆಯೋಗದ ನಿಯೋಗವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ವಿವಿಧ ಘಟಕಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡಿತು.
ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗ ಅಧ್ಯಕ್ಷ ಡಾ.ಅರವಿಂದ ಪನಗಾರಿಯಾ, ಸದಸ್ಯರಾದ ಅಜಯ್ ನಾರಾಯಣ ಝಾ, ಅನ್ನಿ ಜಾರ್ಜ್ ಮ್ಯಾಥ್ಯೂ, ಡಾ.ಮನೋಜ್ ಪಾಂಡಾ ಮತ್ತು ಡಾ.ಸೌಮ್ಯ ಕಾಂತಿ ಘೋಷ್ ತಂಡ ಭೇಟಿ ನೀಡಿ ಕೇಂದ್ರ ಹಾಗೂ ರಾಜ್ಯದ ಅನುದಾನಕ್ಕೆ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ಜಾಲಿಗೆ ಗ್ರಾಮ ಪಂಚಾಯಿತಿಯ ಆಯವ್ಯಯ, ವರಮಾನ, ಪಂಚತಂತ್ರ ಪೋರ್ಟಲ್ ಕಾರ್ಯ ವಿಧಾನದ ಬಗ್ಗೆ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಮಾಲೋಚಿಸಿ ಮಾಹಿತಿ ಪಡೆದುಕೊಂಡರು.
ನಂತರ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿನ ಸೌಲಭ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಮೂರು ವರ್ಷ ಮೇಲ್ಪಟ್ಟ ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ಮತ್ತು ಅವರ ಶೈಕ್ಷಣಿಕ ಪ್ರಗತಿ ಹೊಂದುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಕೂಸಿನ ಮನೆ ವೀಕ್ಷಣೆ ನಡೆಸಿ ಕೂಸಿನ ಮನೆ ಅನುಕೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ವಿಧಾನ ಬಗ್ಗೆ ಮಾಹಿತಿ ಪಡೆದಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಕಾರ್ಯದರ್ಶಿ, ಆಯವ್ಯಯ & ಸಂಪನ್ಮೂಲ ಆರ್ಥಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಸಿ. ಜಾಫರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಮಾ ಮಹಾದೇವನ್, ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್ ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ರಾಜ್ಯ ಹಣಕಾಸು ಅಧಿಕಾರಿಗಳ ತಂಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಹಿಂದಿನ ಹಣಕಾಸು ಆಯೋಗದ ನಿರ್ಧಾರಕ್ಕೆ 16ನೇ ಹಣಕಾಸು ಆಯೋಗ ಜವಾಬ್ದಾರನಲ್ಲ: ಅರವಿಂದ ಪಂಗಾರಿಯ - 16th Finance Commission