ದಾವಣಗೆರೆ: ಟೈರ್ ಸ್ಫೋಟಗೊಂಡು ಬುಲೆರೋ ಟೆಂಪೋ ವಾಹನ ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಹೊರವಲಯದ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಮುಸ್ತಾನ್ (50), ಎಸ್.ಟಿ. ವೀರಣ್ಣ (30), ಪೆದ್ದ ವೆಂಕಣ್ಣ (38) ಎಂಬವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರು ಮಂದಿ ಗಾಯಳುಗಳ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಹಾಗೂ ಗಾಯಾಳುಗಳು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಂ ತಾಲೂಕಿನ ಸಿಂಗರಾಜನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಮೆಣಸಿಕಾಯಿ ತೆಗೆದುಕೊಂಡು ತಮ್ಮೂರಿಗೆ ವಾಪಸ್ ಹೋಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಇತ್ತೀಚಿನ ಅಪಘಾತ, ಮರಕ್ಕೆ ಕಾರು ಡಿಕ್ಕಿ - ಪೊಲೀಸ್ ಸಿಬ್ಬಂದಿ ಸಾವು: ನಿಯಂತ್ರಣ ಕಳೆದುಕೊಂಡ ಕಾರೊಂದು ಮರಕ್ಕೆ ಗುದ್ದಿದ್ದರಿಂದ ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನ್ಯಾಮತಿಯ ದಾನಿಹಳ್ಳಿ ಸಮೀಪ ಇತ್ತೀಚೆಗೆ ನಡೆದಿತ್ತು. ಸಿದ್ದೇಶ್ (34) ಅಪಘಾತದಲ್ಲಿ ಮೃತಪಟ್ಟವರು.
ದಾವಣಗೆರೆ ಡಿಎಆರ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದೇಶ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರೊಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮತ್ತೆ ಅವರನ್ನು ಊರಿಗೆ ಕರೆದುಕೊಂಡು ಬರಲು ಹೋಗಿದ್ದರು. ಈ ವೇಳೆಯಲ್ಲಿ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ವಿಷಯ ತಿಳಿದು ಅಪಘಾತ ನಡೆದ ಸ್ಥಳಕ್ಕೆ ನ್ಯಾಮತಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದರು. ಮನೆಗೆ ಆಧಾರವಾಗಿದ್ದ ಸಿದ್ದೇಶ್ ಅವರನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ಇಲಾಖೆ ಹಾಗೂ ಎಸ್ಪಿ ಉಮಾ ಪ್ರಶಾಂತ್ ಸಂತಾಪ ಸೂಚಿಸಿದ್ದರು.
ಇದನ್ನೂ ಓದಿ: ಟ್ರ್ಯಾಕ್ಟರ್, ಬಸ್ ನಡುವೆ ಡಿಕ್ಕಿ: ಆರು ಕಾರ್ಮಿಕರು ಸಾವು
ಉತ್ತರಪ್ರದೇಶದ ಸಿಕ್ರಾರಾ ಪ್ರದೇಶದ ಸಮದ್‌ಗಂಜ್ ಮಾರುಕಟ್ಟೆ ಬಳಿ ಭಾನುವಾರ ತಡರಾತ್ರಿ ಕಾರ್ಮಿಕರಿದ್ದ ಟ್ರ್ಯಾಕ್ಟರ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಆರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಅಪಘಾತಕ್ಕೆ ಒಳಗಾಗಿರುವ ಬಸ್ ಪ್ರಯಾಗ್‌ರಾಜ್‌ನಿಂದ ಗೋರಖ್‌ಪುರಕ್ಕೆ ಹೋಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.