ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜು ಕ್ಯಾಂಪಸ್‌ನಲ್ಲಿ ಕಳೆದ ನಾಲ್ಕು ದಶಕಗಳಿಂದ ಸಮೋಸ ಮಾರಿ ಜೀವನ ಸಾಗಿಸುತ್ತಿದ್ದ ವಿದ್ಯಾರ್ಥಿಗಳ ಪಾಲಿನ ನೆಚ್ಚಿನ 'ಸಮೋಸ ಅಜ್ಜ' ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ಮೃತಪಟ್ಟರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೂಲದ ಮಧುಕೇಶ್ವರ್ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ (84) ಅವರು 'ಸಮೋಸ ಅಜ್ಜ'ರೆಂದೇ ಖ್ಯಾತರಾಗಿದ್ದರು. ನಾಲ್ಕು ದಶಕಗಳ ಹಿಂದೆ ಅಳಿಯನೊಂದಿಗೆ ಮಂಗಳೂರಿಗೆ ಬಂದಿದ್ದ ಇವರು ಅಲೋಶಿಯಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮೋಸ ಮಾರಲು ಆರಂಭಿಸಿದ್ದರು. ಸಮೋಸದೊಂದಿಗೆ ಚಿಕ್ಕಿ, ನೆಲಗಡಲೆ, ಜಿಲೇಬಿ, ಬರ್ಫಿಗಳನ್ನೂ ಮಾರುತ್ತಿದ್ದರು.
ಮಂಗಳೂರಿನ ಕಾವೂರಿನಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಇವರಿಗೆ ನಾಲ್ವರು ಪುತ್ರಿಯರಿದ್ದು, ಎಲ್ಲರಿಗೂ ಮದುವೆಯಾಗಿದೆ. ಓರ್ವ ಪುತ್ರನಿದ್ದು, ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಗಾಂಧಿ ಟೋಪಿ, ಕನ್ನಡಕ, ಬಿಳಿ ಜುಬ್ಬಾ, ಬಿಳಿ ಕಚ್ಚೆ ಹಾಗು ಹಣೆಗೊಂದು ಬೊಟ್ಟು ಇವರ ಟ್ರೇಡ್ ಮಾರ್ಕ್ ಆಗಿತ್ತು.
ದೇಹಕ್ಕೆ ವಯಸ್ಸಾದರೂ ಎಂದೂ ತಮ್ಮ ವೃತ್ತಿಗೆ ನಿವೃತ್ತಿ ಘೋಷಿಸಿರಲಿಲ್ಲ. ದಿನವೂ ಮಧ್ಯಾಹ್ನ ಊಟದ ಹೊತ್ತಿಗೆ ಸಂಜೆ ಶಾಲೆ ಬಿಡುವ ಸಂದರ್ಭ ಮಕ್ಕಳಿಗೆ ತಿಂಡಿಗಳನ್ನು ಮಾರುತ್ತಿದ್ದರು. ಆದ್ದರಿಂದ ಕಳೆದ ನಾಲ್ಕು ದಶಕಗಳಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಕಲಿತವರೆಲ್ಲ ಈ ಅಜ್ಜನ ನೆನಪನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಸಂತಾಪ: ಸಮೋಸ ಅಜ್ಜನ ನಿಧನಕ್ಕೆ ಸಂತಾಪ ಸೂಚಿಸಿದ ಶಾಸಕ ವೇದವ್ಯಾಸ ಕಾಮತ್, 'ಇನ್ನೊಬ್ಬರಿಗೆ ಸಹಾಯ ಮಾಡುವ ಜೀವನವೊಂದೇ ಶ್ರೇಷ್ಠವಲ್ಲ. ಇನ್ನೊಬ್ಬರಿಗೆ ಸಹಾಯ ಮಾಡುವ ಶಕ್ತಿ ಇಲ್ಲದಿದ್ದರೂ, ಎಂದಿಗೂ ಯಾರಿಗೂ ಕೆಟ್ಟದನ್ನು ಬಯಸದ ಜೀವನವೂ ಕೂಡಾ ಅತ್ಯಂತ ಶ್ರೇಷ್ಠ ಜೀವನವೇ!. ಅಂತಹ ಶ್ರೇಷ್ಠ ಜೀವನ ನಡೆಸಿ 84ರ ಹರೆಯದಲ್ಲೂ "ಕಾಯಕವೇ ಕೈಲಾಸ"ವೆಂಬ ತತ್ವ ನಂಬಿ ಎಲ್ಲರಿಗೂ ಆದರ್ಶವಾಗಿದ್ದ ಮಂಗಳೂರಿನ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರೀತಿಯ "ಸಮೋಸ ಅಜ್ಜ" ಶ್ರೀ ಮಲ್ಲಿಕಾರ್ಜುನ ಮಳಗಿಯವರಿಗೆ ಭಾವಪೂರ್ಣ ನಮನಗಳು. ಮೂಲತಃ ದೂರದ ಬಾಗಲಕೋಟೆಯವರಾಗಿದ್ದ ಈ ಅಜ್ಜನ ಅಗಲಿಕೆಗೆ ಮಂಗಳೂರಿನ ಜನತೆ ಕಂಬನಿ ಮಿಡಿದಿರುವುದು, "ಸಮೋಸ ಅಜ್ಜ" ಹೂವಿನಂತಹ ಮನಸ್ಸಿನಿಂದ ಗಳಿಸಿದ ಬೆಟ್ಟದಷ್ಟು ಪ್ರೀತಿ ವಿಶ್ವಾಸದ ಆಸ್ತಿಗೆ ಸಾಕ್ಷಿ!" ಎಂದು ಬರೆದುಕೊಂಡಿದ್ದಾರೆ.