ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಸರ್ಕಾರದ ಆದೇಶದಂತೆ ಒನ್ ಟೈಮ್ ಸೆಟಲ್ಮೆಂಟ್ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಪಾವತಿಸಲು ಬಿಬಿಎಂಪಿ ಅವಕಾಶ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ 'ಒನ್ ಟೈಮ್ ಸೆಟಲ್ಮೆಂಟ್ (ಒಟಿಎಸ್) ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಅದರಂತೆ ಒಟಿಎಸ್ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆದು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರವು ಫೆ.22 ರಂದು 'ಒನ್ ಟೈಮ್ ಸೆಟಲ್ಮೆಂಟ್'(ಒಟಿಎಸ್) ಯೋಜನೆಯ ಕುರಿತು ಅಧಿಸೂಚನೆ ಹೊರಡಿಸಿತ್ತು.
ಸದ್ಯ ಪಾಲಿಕೆ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸುವ ಸಾಫ್ಟ್ವೇರ್ನಲ್ಲಿ ಒಟಿಎಸ್ ಅನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲ ನಾಗರಿಕರು ಈಗ ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ.
ಬಿಬಿಎಂಪಿಯ ಆನ್‌ಲೈನ್ ಆಸ್ತಿ ತೆರಿಗೆ ಪಾವತಿಯಲ್ಲಿ ಈ ವ್ಯವಸ್ಥೆ ಜಾರಿಗೆ ತಂದಿದ್ದು, ನಾಗರಿಕರು ಸಂಪೂರ್ಣ ಬಡ್ಡಿ ಮನ್ನಾ, ವಂಚನೆ ಪ್ರಕರಣಗಳಲ್ಲಿ ಶೇ.50 ರಷ್ಟು ದಂಡ ಕಡಿತ ಹಾಗೂ ವಸತಿ ಮತ್ತು ಮಿಶ್ರ ಬಳಕೆಗೆ ಪ್ರಕರಣಗಳಲ್ಲಿ ಮಾತ್ರ ಗರಿಷ್ಠ 5 ವರ್ಷಗಳ ಮಿತಿ ಪ್ರಯೋಜನವನ್ನು ತಕ್ಷಣವೇ ಪಡೆಯಬಹುದಾಗಿದೆ. ಪಾಲಿಕೆಯ ಅಧಿಕೃತ ವೆಬ್ಸೈಟ್ https://bbmptax.karnataka.gov.in ಗೆ ಭೇಟಿ ನೀಡಿ, ಒಟಿಎಸ್ನ ಸಂಪೂರ್ಣ ಪ್ರಯೋಜನವನ್ನು ಆನ್‌ಲೈನ್‌ನಲ್ಲಿ ಪಡೆದು ಪಾವತಿಸಬಹುದಾಗಿದೆ.
ಬಿಬಿಎಂಪಿಯ ಪತ್ಯೇಕ ಪ್ರಕಟಣೆ: ಬಿಬಿಎಂಪಿಯು ನಿವೇಶನದ ಮಾರ್ಗಸೂಚಿ ದರ ಆಧಾರಿತ ಆಸ್ತಿ ತೆರಿಗೆ ನಿಗದಿ ಮಾಡಲು ನಿರ್ಧಾರ ಮಾಡಿದೆ. ನಿವೇಶನ, ಕಟ್ಟಡ, ವಾಣಿಜ್ಯ ಹಾಗೂ ಇತರ ಬಳಕೆಗೆ ಆಸ್ತಿ ತೆರಿಗೆ ಪ್ರಮಾಣವನ್ನು ನಿಗದಿಪಡಿಸಿ, ಹೊಸ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಆಕ್ಷೇಪಣೆ ಸಲ್ಲಿಸಲು 14 ದಿನಗಳವರೆಗೆ ಸಾರ್ವಜನಿಕರಿಗೆ ಕಾಲಾವಕಾಶ ಕೂಡಾ ನೀಡಲಾಗಿದೆ.
ವಸತಿ ನಿವೇಶನ, ಭೂಮಿ ಹಾಗೂ ವಸತಿ ಖಾಲಿ ಪ್ರದೇಶಗಳನ್ನು ಎರಡು ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ಅಪಾರ್ಟ್ಮೆಂಟ್, ಫ್ಲ್ಯಾಂಟ್ ಸೇರಿದಂತೆ ಭೂಮಿ, ನಿವೇಶನಗಳನ್ನು ಬಾಡಿಗೆ ಕೊಟ್ಟಿದ್ದರೆ, ವರ್ಷಕ್ಕೆ ಪ್ರತಿ ಅಡಿಗೆ ಕರ್ನಾಟಕ ಸ್ಟ್ಯಾಂಪ್ ಕಾಯ್ದೆಯಲ್ಲಿ ನಮೂದಾಗಿರುವ ಮಾರ್ಗಸೂಚಿ ದರ ಶೇಕಡಾ 0.2 ರಷ್ಟು ಆಸ್ತಿ ತೆರಿಗೆ ಪಾವತಿ ಮಾಡಬೇಕಿದೆ. ಸ್ವತ್ತು ಮಾಲೀಕರೇ ಉಪಯೋಗಿಸುತ್ತಿದ್ದರೆ ಮಾರ್ಗಸೂಚಿ ದರದ ಶೇಕಡಾ 0.1 ರಷ್ಟು ತೆರಿಗೆ ಭರಿಸಬೇಕಾಗುತ್ತದೆ. ಆಸ್ತಿ ಸಂಪೂರ್ಣ ಖಾಲಿ ಪ್ರದೇಶವಾಗಿದ್ದರೆ ಶೇಕಡಾ 0.25 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ನಿವೇಶನ ಬಾಡಿಗೆ ನೀಡಿದರೆ, ಪ್ರತಿ ಚದರ ಅಡಿಗೆ ಮಾರ್ಗಸೂಚಿ ದರದಲ್ಲಿ ಶೇಕಡಾ 0.5 ರಷ್ಟು, ಸ್ವಂತ ಬಳಕೆಯಲ್ಲಿದ್ದರೆ ಶೇಕಡಾ 0.25 ರಷ್ಟು, ಕಟ್ಟಡಕ್ಕೆ ಶೇಕಡಾ 0.5 ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ನಾಗರಿಕರು ಆಕ್ಷೇಪಣೆ ಗಳಿದ್ದರೆ, 14ದಿನಗಳೊಳಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಲ್ಲಿಕೆ ಮಾಡಸಬೇಕಿದೆ. spcommrev@bbmp.gov.in ಇ-ಮೇಲ್ ಕೂಡ ಮಾಡಬಹುದಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕರಡು ಹೇಳಿದ್ದಾರೆ.
ಇದನ್ನೂ ಓದಿ: ಗೈಡೆನ್ಸ್ ವ್ಯಾಲ್ಯೂ ಆಧಾರದಲ್ಲಿ ತೆರಿಗೆ ಸಂಗ್ರಹದ ಬಿಬಿಎಂಪಿ ಬಿಲ್ಗೆ ವಿಧಾನ ಪರಿಷತ್ ಅಂಗೀಕಾರ