ಹಾವೇರಿ : ಜಿಲ್ಲೆಯ ಸಮೀಪದ ಯತ್ತಿನಹಳ್ಳಿ ಗ್ರಾಮದ ಬಳಿಯ ಲೇಔಟ್ವೊಂದರ ಕಾಲುವೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಬಳಸಲಾಗುತ್ತಿದ್ದ ನಿರುಪಯುಕ್ತ 10 ಬ್ಯಾಲೆಟ್ ಬಾಕ್ಸ್ಗಳು ಪತ್ತೆಯಾಗಿವೆ.
ನಗರದ ಎಪಿಎಂಸಿಯಲ್ಲಿರುವ ಒಂದು ಹಳೆ ಗೋದಾಮಿನಲ್ಲಿ ಇಡಲಾಗಿದ್ದ ಹಳೆಯ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್ಗಳು ಇವಾಗಿವೆ. ಕಂದಾಯ ಇಲಾಖೆಯವರು ಹಲವು ವರ್ಷಗಳ ಹಿಂದೆ ಇಲ್ಲಿಗೆ ಬ್ಯಾಲೆಟ್ ಬಾಕ್ಸ್ಗಳನ್ನು ತಂದಿಟ್ಟಿದ್ದಾರೆ. ಕಿಡಿಗೇಡಿಗಳು ಬಾಕ್ಸ್ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಹೋಗುವಾಗ ಸಾಗಿಸಲಾಗದೇ ಲೇಔಟ್ನ ಕಾಲುವೆಯಲ್ಲಿ ಬಿಟ್ಟುಹೋಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬಳಕೆಯಲ್ಲಿ ಇಲ್ಲದ ಬ್ಯಾಲೆಟ್ ಬಾಕ್ಸ್ಗಳನ್ನು ಇಟ್ಟಿದ್ದ ಗೋದಾಮಿಗೆ ಪೊಲೀಸರು, ಹಾವೇರಿ ತಹಶೀಲ್ದಾರ್ ಶರಣಮ್ಮ ಹಾಗೂ ಅಧಿಕಾರಿಗಳು ಭೇಟಿ ನೀಡಿದರು. ಕಂದಾಯ ಇಲಾಖೆಯವರಿಂದ ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ನಿನ್ನೆ ಶಿಗ್ಗಾಂವಿ ಉಪಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ಬಳಕೆಯಲ್ಲಿದ್ದ ಬ್ಯಾಲೆಟ್ ಬಾಕ್ಸ್ಗಳು ಪತ್ತೆಯಾದ ಹಿನ್ನೆಲೆ ಯತ್ತಿನಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದರು.
ಉಪಚುನಾವಣೆಯಲ್ಲಿ ಇವಿಎಂ ಬಳಸಲಾಗಿದೆ. ಲೇಔಟ್ನಲ್ಲಿ ಪತ್ತೆಯಾದ ಬ್ಯಾಲೆಟ್ ಬಾಕ್ಸ್ಗಳು ನಿರುಪಯುಕ್ತವಾಗಿದ್ದವು. ಹಲವು ವರ್ಷಗಳಿಂದ ಬಳಕೆಯಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ. ವಿಜಯ ಮಹಂತೇಶ ಅವರು ಮಾತನಾಡಿ, ''ಮಾಧ್ಯಮದಲ್ಲಿ ಮಾಡಿರುವ ವರದಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನ ತೆಗೆದುಕೊಂಡಿದ್ದೇನೆ. 2020ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಾದ ನಂತರ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಳದ ಕೊರತೆ ಇದ್ದಿದ್ದರಿಂದ ಬ್ಯಾಲೆಟ್ ಬಾಕ್ಸ್ಗಳನ್ನ ನಾವು ಎಪಿಎಂಸಿ ಗೋಡಾನ್ನಲ್ಲಿ ಇಟ್ಟಿದ್ದೆವು. 8 ತಿಂಗಳ ಹಿಂದೆ ಅಲ್ಲಿ ಬೆಂಕಿ ಅವಘಡವೂ ಆಗಿತ್ತು ಎಂಬುದನ್ನ ನಾವು ಕೇಳ್ಪಟ್ಟೆ. ಮೇಲ್ನೋಟಕ್ಕೆ ಯಾರೋ ಅಲ್ಲಿ ಕಳ್ಳತನ ಮಾಡಿ ಕಾಲುವೆಯಲ್ಲಿ ಬಿಸಾಕಿದ್ದು ಕಂಡುಬಂದಿದೆ. ಈಗಾಗಲೇ ನಾವು ತಹಶೀಲ್ದಾರ್ಗೆ ಸೂಚನೆಯನ್ನ ಕೊಟ್ಟಿದ್ದೇವೆ. ಅವರು ಎಫ್ಐಆರ್ ಮಾಡಲಿಕ್ಕೆ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸ್ ತನಿಖೆಯಿಂದ ಸತ್ಯಾಂಶ ಏನು ಹೊರಬರಲಿದೆ ನೋಡೋಣ'' ಎಂದರು.
ಬ್ಯಾಲೆಟ್ ಬಾಕ್ಸ್ಗೂ, ಚುನಾವಣೆಗೂ ಸಂಬಂಧವಿಲ್ಲ : ''ಸಾಮಾನ್ಯವಾಗಿ ನಾವು ಬ್ಯಾಲೆಟ್ ಪೇಪರ್ನ್ನು ಈ ಬಾಕ್ಸ್ನಲ್ಲಿ ಹಾಕುತ್ತೇವೆ. ವಿಶೇಷವಾಗಿ ಗ್ರಾಮ ಪಂಚಾಯಿತಿ, ಸಹಕಾರಿ ಇಲಾಖೆ ಮತ್ತು ಕೆಲವು ಸಂದರ್ಭದಲ್ಲಿ ನಮ್ಮ ಸರ್ಕಾರಿ ಇಲಾಖೆಯ ಚುನಾವಣೆಯ ಸಂದರ್ಭದಲ್ಲಿಯೂ ಅಂತಹ ಬಾಕ್ಸ್ಗಳನ್ನ ತೆಗೆದುಕೊಂಡು ಹೋಗ್ತಾರೆ. ಬಾಕ್ಸ್ ಪತ್ತೆಯಾಗಿರೋದಕ್ಕೂ, ನಿನ್ನೆ ನಡೆದ ಚುನಾವಣೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡಿಕೊಡುವ ಅವಶ್ಯಕತೆಯೂ ಇಲ್ಲ. ಇವು ಹಳೆಯ ಬಾಕ್ಸ್ಗಳು, ನಾವು ಅಲ್ಲಿ ಇಟ್ಟಿದ್ದು ಈ ರೀತಿಯಾಗಿದೆ. ತಹಶೀಲ್ದಾರ್ ಅವರು ಎಫ್ಐಆರ್ ಹಾಕಲಿದ್ದಾರೆ. ಮುಂದೆ ತನಿಖೆಯಾಗಲಿದೆ'' ಎಂದು ಹೇಳಿದರು.
ಇದನ್ನೂ ಓದಿ : ಶಿಗ್ಗಾಂವಿ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನ: ಅಮೆರಿಕದಿಂದ ಬಂದು ವೋಟ್ ಮಾಡಿದ ಯುವತಿ!