ಬೆಂಗಳೂರು: ರಾಜ್ಯ ಸಿಐಡಿ ಘಟಕದಿಂದ ತನಿಖೆಯಾಗಿರುವ 3 ಪ್ರತ್ಯೇಕ ಪ್ರಕರಣದ ಆರೋಪಿಗಳಿಗೆ ಒಂದೇ ವಾರದಲ್ಲಿ ಸಜೆ ಪ್ರಕಟವಾಗಿದೆ. ಬೆಂಗಳೂರಿನ ರಾಮಮೂರ್ತಿ ನಗರ, ಸಿಐಡಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಹಾಗೂ ಕೋಲಾರದ ಬೇತಮಂಗಲ ಠಾಣೆಗಳಲ್ಲಿ ದಾಖಲಾಗಿದ್ದ ಪ್ರತ್ಯೇಕ ಪ್ರಕರಣಗಳ ತನಿಖೆ ನಡೆಸಿದ್ದ ಸಿಐಡಿ ತನಿಖಾಧಿಕಾರಿಗಳು, ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಸದ್ಯ ನ್ಯಾಯಾಲಯ ಆರೋಪಿಗಳಿಗೆ ಸಜೆಯನ್ನು ವಿಧಿಸಿ ಆದೇಶಿಸಿದೆ.
2011ರಲ್ಲಿ ಆರೋಪಿತ ಜಾನ್ ಮೈಕೆಲ್ ಎಂಬಾತ ತಾನು ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಹಾಗೂ ಆಡಳಿತಾತ್ಮಕವಾಗಿ, ರಾಜಕೀಯವಾಗಿ ತುಂಬಾ ಪ್ರಭಾವವಿರುವವನು ಎಂದು ನಂಬಿಸಿ, ತನ್ನ ಪ್ರಭಾವದಿಂದ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ಬಿಡಿಎಯಿಂದ ಸೈಟ್‌ಗಳನ್ನು ಮಾಡಿಸಿಕೊಡುತ್ತೇನೆಂದು ತಪ್ಪು ಮಾಹಿತಿಯನ್ನು ನೀಡಿ ಇಬ್ಬರಿಂದ ರೂ. 30,82,032 ರೂ ಹಣವನ್ನು ಪಡೆದುಕೊಂಡಿದ್ದ. ಬಳಿಕ ಸೈಟುಗಳಿಗೆ ಸಂಬಂದಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ನೈಜವೆಂದು ಮಾರಾಟ ಮಾಡಿದ್ದ. ಸೈಟ್ ಕೊಡಿಸದೆ, ಹಣವನ್ನೂ ನೀಡದ ಜಾನ್ ಮೈಕೆಲ್ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪಿಗೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು ರೂ. 44,10,000 ದಂಡ ವಿಧಿಸಿ ನಗರದ 48ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ಎರಡನೇ ಪ್ರಕರಣದ ಆರೋಪಿಯಾಗಿರುವ ಮರಿಯಪ್ಪ ಎಂಬಾತ 2013ರಲ್ಲಿ ಬಂಗಾರಪೇಟೆ ತಾಲೂಕು ಕಗ್ಗಲಳ್ಳಿ ಗ್ರಾಮದಲ್ಲಿನ 1 ಎಕರೆ 23 ಗುಂಟೆ ಜಮೀನಿಗೆ ತಾನೇ ಮಾಲೀಕನೆಂದು ನಟಿಸಿ, ಬೇರೊಬ್ಬರಿಗೆ ನೋಂದಾಯಿತ ಜಿಪಿಎ ಅಧಿಕಾರ ಪತ್ರ ನೀಡಿ ಹಕ್ಕು ಬದಲಾವಣೆ ಮಾಡಿದ್ದ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದ ಮರಿಯಪ್ಪನ ವಿರುದ್ಧ ಜಮೀನಿನ ಮೂಲ ಮಾಲೀಕ ಬೀರಪ್ಪ, ಕೋಲಾರ ಜಿಲ್ಲೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸದ್ಯ ಆರೋಪಿಗೆ ಕೆಜಿಎಫ್ನ ಜೆಎಂಎಫ್‌ಸಿ ನ್ಯಾಯಾಲಯ 6 ತಿಂಗಳ ಸಾದಾ ಶಿಕ್ಷೆ ಮತ್ತು 6 ಸಾವಿರ ರೂ. ದಂಡವನ್ನು ವಿಧಿಸಿದೆ.
ಮೂರನೇ ಪ್ರಕರಣದಲ್ಲಿ ಆರೋಪಿತಯಾಗಿರುವ ರಾಘವನ್ ಸಂಪತ್, 2017ರಲ್ಲಿ ತನ್ನ ಇ-ಮೇಲ್ ಮುಖಾಂತರ ಮಹಿಳೆಯೊಬ್ಬರಿಗೆ ಅಶ್ಲೀಲ ವಿಡಿಯೋ ರವಾನಿಸಿದ್ದ. ಆರೋಪಿತನ ವಿರುದ್ಧ ಮಹಿಳೆ ಸಿಐಡಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ 1 ತಿಂಗಳ ಸಾದಾ ಶಿಕ್ಷೆ ಮತ್ತು 45 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ: ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದ್ದ ಪೋಕ್ಸೋ ಅಪರಾಧಿಗೆ 10 ವರ್ಷ ಶಿಕ್ಷೆ ವಿಧಿಸಿದ ಹೈಕೋರ್ಟ್