ಬೆಂಗಳೂರು: ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡಿ ನುಡಿದಂತೆ ನಡೆದಿದೆ. ನುಡಿದಂತೆ ನಡೆದ ಕಾಂಗ್ರೆಸ್ಗೆ ಮತ ಹಾಕುತ್ತೀರಾ? ಇಲ್ಲ ನಂಬಿಸಿ ಮೋಸ ಮಾಡುವ ಮೋದಿಗೆ ಮತ ಹಾಕುತ್ತೀರಾ?. ಕೇಂದ್ರ ಸರ್ಕಾರ ಗುಜರಾತಿನ ಏಳು ಸಂಸದರಿಗೆ ಸಂಪುಟ ಸಚಿವ ಸ್ಥಾನ ನೀಡಿದೆ. ಉತ್ತರ ಪ್ರದೇಶದ 18 ಸಂಸದರಿಗೆ ಸಂಪುಟ ಸ್ಥಾನ ನೀಡಿತ್ತು. ಆದರೆ, 25 ಸ್ಥಾನ ಗೆಲ್ಲಿಸಿ ಕೊಟ್ಟಿದ್ದ ಕರ್ನಾಟಕದಲ್ಲಿ ಪ್ರಹ್ಲಾದ್ ಜೋಷಿಗೆ ಮಾತ್ರ ಸಂಪುಟ ಸಚಿವ ಸ್ಥಾನ ನೀಡಿದೆ. ಇದು ಕರ್ನಾಟಕಕ್ಕೆ ಮಾಡಿದ ಅವಮಾನ ಎಂದು ಕಿಡಿ ಕಾರಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಲೋಕಸಭಾ ಚುನಾವಣೆಯ ಬೃಹತ್ ಪ್ರಚಾರ ಸಭೆಯಲ್ಲಿ ಬೆಂಗಳೂರು ಕೇಂದ್ರ ಕೈ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪರ ಮತಯಾಚನೆ ವೇಳೆ ಅವರು ಮಾತನಾಡಿದರು. ಕರ್ನಾಟಕದ ಜನರು 20 ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಗುಜರಾತ್, ಉತ್ತರ ಪ್ರದೇಶದವರಿಗೆ ಕೇಂದ್ರ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನ ನೀಡಲಾಗಿದೆ. ಕರ್ನಾಟಕ, ತೆಲಂಗಾಣದವರಿಗೆ ಪ್ರಮುಖ ಖಾತೆಗಳನ್ನು ಏಕೆ ನೀಡುತ್ತಿಲ್ಲ?. ಗುಜರಾತ್, ಉತ್ತರ ಪ್ರದೇಶದಲ್ಲಿ ಮಾತ್ರ ಸಮರ್ಥ ನಾಯಕರಿರೋದಾ?. ಕರ್ನಾಟಕ, ತೆಲಂಗಾಣದಲ್ಲಿ ಸಮರ್ಥ ನಾಯಕರು ಇಲ್ವಾ?. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ ಎಂದು ತೆಲಂಗಾಣ ಸಿಎಂ ಪ್ರಶ್ನಿಸಿದರು.
ಇದನ್ನೂ ಓದಿ: ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೇಶ-ವಿದೇಶದ ದೊಡ್ಡ ಶಕ್ತಿಗಳಿಂದ ಹುನ್ನಾರ: ಮೋದಿ - PM Modi
ಈ ಲೋಕಸಭೆ ಚುನಾವಣೆ ಎರಡು ಪರಿವಾರದ ನಡುವಿನ ಯುದ್ಧ. ಮೋದಿ ನೇತೃತ್ವದ ಇವಿ ಮಷಿನ್, ಇಡಿ, ಐಟಿ, ಸಿಬಿಐ, ಅದಾನಿ, ಅಂಬಾನಿಯ ಒಂದು ಪರಿವಾರವಾಗಿದ್ದರೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ, ಮನ್ಸೂರ್ ಅಲಿ ಖಾನ್ ನಮ್ಮ ಪರಿವಾರವಾಗಿದೆ. ಈ ಎರಡು ಪರಿವಾರದ ನಡುವಿನ ಯುದ್ಧವಾಗಿದೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಿಳಿಸಿದರು.
ದೇವೇಗೌಡರು ಹಾಗೂ ಅವರ ಮಗನನ್ನು ಭ್ರಷ್ಟಾಚಾರದ ಮೇಲೆ ಜೈಲಿಗೆ ಕಳುಹಿಸುತ್ತೇನೆ ಎಂದು ವರ್ಷದ ಹಿಂದೆ ಮೋದಿ ಹೇಳಿದ್ದರು. ಆದರೆ ಈಗ ಅವರ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿಯವರು ದೇವೇಗೌಡ ಕುಟುಂಬದ ಬಗ್ಗೆ ಹೇಳಿರುವುದನ್ನು ಮರೆತಿದ್ದಾರೆ. ಈಗ ಗಾಲಿ ಜನಾರ್ಧನ ರೆಡ್ಡಿಯವರೂ ಮೋದಿಯ ಪಕ್ಕ ಕೂತಿದ್ದಾರೆ. ಅದರ ಅರ್ಥ ಮೋದಿಯವರು ಹೇಳಿದ್ದನ್ನೂ ಯಾವುದೂ ಮಾಡುವುದಿಲ್ಲ. ಹೇಳುವುದು ಒಂದು ಮಾಡುವುದು ಇನ್ನೊಂದು. ಕೇವಲ ಚುನಾವಣೆ ಗೆಲ್ಲಲು ಯೋಚನೆ ಮಾಡುತ್ತಾರೆಯೇ ಹೊರತು, ಕರ್ನಾಟಕ ಅಭಿವೃದ್ಧಿಗೆ ಏನನ್ನೂ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಒಟ್ಟು 28 ಲೋಕಸಭೆ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮೊದಲ ಹಂತದದಲ್ಲಿ ಇದೇ ತಿಂಗಳು 26ರಂದು ಮತದಾನ ನಡೆಯಲಿದೆ. ಮೇ 7ರಂದು ಎರಡನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಚುನಾವಣೆ ಜರುಗಲಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಮೋದಿಯವರೇ ನೀವು ನಿಜವಾಗಿ ರೈತರ ಹಿತೈಷಿಯಾ? ಹಿತಶತ್ರುವಾ?: ಸಿಎಂ ಸಿದ್ದರಾಮಯ್ಯ - CM Siddaramaiah