ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿಸಿ ನಾಲೆಗೆ ಬಿದ್ದ ಪರಿಣಾಮ ಯುವಕ ಮೃತಪಟ್ಟು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಡ್ಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ದೊಡ್ಡಬ್ಯಾಡರಹಳ್ಳಿ ಗ್ರಾಮದ ನಂದೀಶ್(19) ಮೃತ ಯುವಕ.
ಯೋಗಾನಂದ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ ನಡೆಸಿದರು. ಮೃತದೇಹವನ್ನು ಮಂಡ್ಯ ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಸಿ ನಾಲೆಗೆ ತಡೆಗೋಡೆ ಇಲ್ಲದಿರುವುದರಿಂದ ಇಂತಹ ದುರಂತಗಳು ಮೇಲಿಂದ ಮೇಲೆ ಸಂಭವಿಸುತ್ತಲೇ ಇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಪಾಂಡವಪುರ ತಾಲೂಕಿನ ಬನ್ನಘಟ್ಟ ಬಳಿ ಇದೇ ವಿಸಿ ನಾಲೆಗೆ ಕಾರು ಉರುಳಿ ಬಿದ್ದ ಪರಿಣಾಮ ಐವರು ಮೃತಪಟ್ಟ ಘಟನೆ ನಡೆದಿತ್ತು. ಮೈಸೂರಿನಿಂದ ಭದ್ರಾವತಿಗೆ ವಾಪಸ್ ಹೋಗುವಾಗ ಘಟನೆ ನಡೆದಿತ್ತು. ದುರಂತದಲ್ಲಿ ಭದ್ರಾವತಿ ಮೂಲದ ಚಂದ್ರಪ್ಪ(61), ಕೃಷ್ಣಪ್ಪ (60), ಧನಂಜಯ್ಯ (55), ಬಾಬು ಮತ್ತು ಜಯಣ್ಣ ಎಂಬುವರು ಮೃತಪಟ್ಟಿದ್ದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚಂದ್ರಪ್ಪಗೆ ಸೇರಿದ (ಕೆಎ -14, ಎ 2457) ಬಿಳಿ ಬಣ್ಣದ ಕಾರು ವೇಗವಾಗಿ ಚಲಿಸುತ್ತಿದ್ದ ವೇಳೆ ತಿರುವಿನಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಬಿದ್ದಿತ್ತು. ನಾಲೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಶಾಸಕರ ಪರಿಶೀಲನೆ ವೇಳೆ ಜನರ ಮೇಲೆ ನುಗ್ಗಿದ ಎತ್ತುಗಳು; ಮಂಡ್ಯ ವಿಸಿ ನಾಲೆ ಬಳಿ ತಪ್ಪಿದ ದುರಂತ