ಮೈಸೂರು: "ಈ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಮಾಡಿರುವ ನಂಬಿಕೆ ದ್ರೋಹಕ್ಕೆ, ಜನದ್ರೋಹಕ್ಕೆ ಪಾಠ ಕಲಿಸಿ" ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು. ಇಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
"ಜನರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ಬೆಂಕಿ ಇಡುವ ಕೆಲಸವನ್ನು ನಾವು ಮಾಡುವುದಿಲ್ಲ. ನಾವು ಜನರ ಭಾವನೆಗಳನ್ನು ಕೆರಳಿಸುವುದಿಲ್ಲ. ಬದಲಿಗೆ ಭಾವನೆಗಳನ್ನು ಗೌರವಿಸುತ್ತಲೇ ಜನರ ಬದುಕನ್ನು ಸುಧಾರಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಜನರಿಗೆ ಬದುಕು ಮುಖ್ಯ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳ ಕಾರ್ಯಕ್ರಮ ಜಾರಿ ಮಾಡಿದೆವು. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎಂಟು ತಿಂಗಳಲ್ಲಿ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಪ್ರತೀ ಫಲಾನುಭವಿ ಕುಟುಂಬಗಳಿಗೆ ತಿಂಗಳಿಗೆ 4-5 ಸಾವಿರ ಉಳಿತಾಯ ಆಗುತ್ತಿದೆ. ಇದರಿಂದ ಜನರ ಬದುಕಿನ ಸಂಕಷ್ಟ ಕಡಿಮೆಯಾಗುತ್ತಿದೆ" ಎಂದರು.
"ಸೋಲಿನ ಭಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಲಕ್ಷ್ಮಣ್ ಒಕ್ಕಲಿಗರೇ ಅಲ್ಲ ಎನ್ನುವ ಸುಳ್ಳು ಹರಡಿಸಿದ್ದಾರೆ. ಎಂ.ಲಕ್ಷ್ಮಣ್ ಒಕ್ಕಲಿಗರಾಗಿ ಹುಟ್ಟಿ ವಿಶ್ವ ಮಾನವರಾಗುವ ಹಾದಿಯಲ್ಲಿ ನಡೆಯುತ್ತಾ ಕುವೆಂಪು ಆಶಯವನ್ನು ಪಾಲಿಸುತ್ತಿದ್ದಾರೆ" ಎಂದು ಹೇಳಿದರು.
"ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಬಂದು ಸುಳ್ಳಿನ ಮೇಲೆ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕೇಂದ್ರ ತಂಡವೇ ಬರಗಾಲದ ವರದಿ ನೀಡಿ ಐದು ತಿಂಗಳಾಯಿತು. ಇವತ್ತಿನವರೆಗೂ ಕನ್ನಡಿಗರ ಪಾಲಿನ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ನೀವು ಹೇಳಿದ ಸುಳ್ಳನ್ನು ಸತ್ಯ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ನೀವೇನು ಮಾಡ್ತೀರಿ, ನಿರ್ಧರಿಸಿ" ಎಂದು ಸವಾಲು ಹಾಕಿದರು.
ಭರ್ಜರಿ ಲೀಡ್ ಕೊಟ್ಟು ನನ್ನ ಶಕ್ತಿ ಹೆಚ್ಚಿಸಿ: ಇಲ್ಲಿ ಬಂದಿರುವ ನೀವುಗಳೇ ಲೋಕಸಭಾ ಅಭ್ಯರ್ಥಿಗಳು. ಇಲ್ಲಿ ಲಕ್ಷ್ಮಣ್ ಗೆದ್ದರೆ ನಾನು ಗೆದ್ದಂತೆ. ಕಾಂಗ್ರೆಸ್ ಗೆದ್ದರೆ ಸತ್ಯ ಗೆದ್ದಂತೆ ಎಂದರು.
ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, "ರಾಜ್ಯದಲ್ಲಿ ಮೋದಿ ಅಲೆಯೂ ಇಲ್ಲ, ಬಿಜೆಪಿ 200 ಸ್ಥಾನಗಳನ್ನು ಗೆಲ್ಲುವುದೂ ಇಲ್ಲ. ಬಿಜೆಪಿಯಲ್ಲಿ ಇರುವಷ್ಟು ಭಿನ್ನಾಭಿಪ್ರಾಯ ಹಾಗೂ ಕಿತ್ತಾಟಗಳು ನಮ್ಮಲ್ಲಿ ಇಲ್ಲ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ಬಿಜೆಪಿ ಅಭ್ಯರ್ಥಿಯ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಮಾತನಾಡಿದರೂ ಏನೂ ಪ್ರಯೋಜನವಿಲ್ಲ. ಜನರ ಸೇವೆ ಮಾಡುವವರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೆನಪಿಟ್ಟುಕೊಳ್ಳುತ್ತಾರೆ. ಬಿಜೆಪಿಯವರು ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಮೋದಿ ಅಲೆ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. 15 ಲಕ್ಷ ಕೊಟ್ಟು ಮಾತನ್ನು ಉಳಿಸಿಕೊಂಡಿದ್ದೇವೆ. ಅಚ್ಛೇ ದಿನ್ ತಂದಿದ್ದೇವೆ. ರೈತರ ಆದಾಯ ದುಪ್ಪಟ್ಟು ಮಾಡಿದ್ದೇವೆ ಎಂದು ಹೇಳಿ ಮತ ಕೇಳುತ್ತಿಲ್ಲ" ಎಂದರು.
"ಮೋದಿ ಅಲೆ ಇದೆ ಎಂದು ಓಡಾಡುತ್ತಿದ್ದಾರೆ. ಎಲ್ಲಿದೆ ಮೋದಿ ಅಲೆ? ಮೋದಿ ಅವರು ವಿಧಾನಸಭಾ ಚುನಾವಣೆಯಲ್ಲಿ ಹಳ್ಳಿ, ಊರೂರು, ಗಲ್ಲಿ ಸುತ್ತಾಡಿದರೂ ಬಿಜೆಪಿ ಗತಿ ಏನಾಯಿತು? ಅಮಿತ್ ಷಾ ಅವರು ಚನ್ನಪಟ್ಟಣದಲ್ಲಿ ಏಕೆ ರೋಡ್ ಶೋ ಮಾಡಿದರು? ಏಕೆಂದರೆ ರಾಜ್ಯದಲ್ಲಿ ಮೋದಿ ಅಲೆ ಇಲ್ಲ" ಎಂದು ಹೇಳಿದರು.
"ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ತಾಯಂದಿರು 'ಗ್ಯಾರಂಟಿ' ಉಪಕಾರ ಸ್ಮರಣೆಯನ್ನು ಮರೆಯವುದಿಲ್ಲ. ರಾಜ್ಯದಲ್ಲಿ ಗ್ಯಾರಂಟಿ ಅಲೆ ಬಿಟ್ಟರೆ ಯಾವ ಅಲೆಯೂ ಇಲ್ಲ."
"15 ಲಕ್ಷ ಎಲ್ಲಿ, ಅಚ್ಛೇ ದಿನ್ ಎಲ್ಲಿ, 2 ಕೋಟಿ ಉದ್ಯೋಗ ಎಲ್ಲಿ ಎಂದು ಬಿಜೆಪಿಯವರು ಬಂದರೆ ಅವರನ್ನು ಪ್ರಶ್ನೆ ಮಾಡಿ. ಅವರಿಗೆ ಮತ ಕೇಳುವ ಹಕ್ಕು ಇಲ್ಲ. ಈಗ ಇರುವ ಎಂಪಿಗಳ ಮುಖ ನೋಡಿದರೆ ಜನ ಮತ ಹಾಕುವುದಿಲ್ಲ ಎಂದು ಬಿಜೆಪಿಯವರು 12 ಲೋಕಸಭಾ ಸದಸ್ಯರನ್ನು ಬದಲಾಯಿಸಿದ್ದಾರೆ" ಎಂದು ಟೀಕಿಸಿದರು.
ದೇಶದಲ್ಲಿ ಬಿಜೆಪಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ: "ದೇಶದಲ್ಲಿ ಬಿಜೆಪಿಯವರು 200 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸದಸ್ಯರು 28 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುತ್ತಾರೆ" ಎಂದು ಭವಿಷ್ಯ ನುಡಿದರು.
"ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಎಲ್ಲಾ ಮಿತ್ರ ಪಕ್ಷಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಬೇಕು. ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲಿಗರು, ನೆಂಟರು ಬಂದು 'ನಮಗೆ ಬಿಜೆಪಿಯಲ್ಲಿ ಇರಲು ಆಗುವುದಿಲ್ಲ' ಎಂದು ಕಾಂಗ್ರೆಸ್ ಸೇರಲು ಬಂದಿದ್ದಾರೆ. ಜನತಾದಳ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳುತ್ತೇನೆ. ಮುಂದಿನ 10 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ" ಎಂದರು.
"ನಾನು ಮತ್ತು ಸಿದ್ದರಾಮಯ್ಯ ಅವರು ಹಾಗು ಸಂಪುಟದ ಸಹೋದ್ಯೋಗಿಗಳು ಒಗ್ಗಟ್ಟಾಗಿ ಈ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತೇವೆ. ಅಮಿತ್ ಶಾ ಅವರೇ ಅಧಿಕಾರ ಉಳಿಸಿಕೊಳ್ಳಲು ನಾನು ಕಾಯುತ್ತಿದ್ದೇನೆ ಎನ್ನುವುದು ನಿಮ್ಮ ಭ್ರಮೆ. ತಲೆಕೆಡಿಸಿಕೊಳ್ಳಬೇಡಿ ನಿಮ್ಮಲ್ಲಿ ಇರುವಷ್ಟು ಭಿನ್ನಾಭಿಪ್ರಾಯ, ಕಿತ್ತಾಟ ನಮ್ಮಲ್ಲಿಲ್ಲ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸಚಿವ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ಅಭ್ಯರ್ಥಿ ಎಂ.ಲಕ್ಷ್ಮಣ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ನಾಮಪತ್ರ ಸಲ್ಲಿಕೆ - Prof Rajeev Gowda