ಬೆಳಗಾವಿ: ರಾಷ್ಟ್ರ,ರಾಜ್ಯ ನಾಯಕರ ಅಪೇಕ್ಷೆಯಂತೆ ತೆಲಂಗಾಣದ 17 ಕ್ಷೇತ್ರಗಳ ಪೈಕಿ 10ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಿಸಲು ಪೂರಕವಾಗಿ ಕೆಲಸ ಮಾಡಲಾಗುವುದು ಎಂದು ತೆಲಂಗಾಣ ಚುನಾವಣೆ ಬಿಜೆಪಿ ಉಸ್ತುವಾರಿ ಆಗಿರುವ, ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ ಹೇಳಿದರು.
ಬೆಳಗಾವಿಯಲ್ಲಿ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ನಾಳೆ ಹೈದರಾಬಾದ್ಗೆ ಹೋಗುತ್ತೇನೆ. ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖರನ್ನು ಭೇಟಿಯಾಗುತ್ತೇನೆ. ಈ ವರೆಗೆ ಆಗಿರುವ ಬೆಳವಣಿಗೆಗಳನ್ನು ತಿಳಿದುಕೊಂಡು, ಚುನಾವಣೆವರೆಗೆ ಯಾವ ರೀತಿ ಕೆಲಸ ಮಾಡಬೇಕು ಎಂದು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಮೋದಿ ಅವರನ್ನು ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ನೋಡಿ ಜನ ಬಿಜೆಪಿಗೆ ಮತ ಹಾಕುತ್ತಾರೆ. ಅದೇ ರೀತಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಿಂದಿನದಕ್ಕಿಂತ ಹೆಚ್ಚು ಸೀಟ್ ಗೆದ್ದಿದ್ದೇವೆ. ಅಲ್ಲದೇ ಶೇಕಡಾವಾರು ಮತಗಳಿಕೆ ಕೂಡ ಹೆಚ್ಚಾಗಿದೆ. ಹಾಗಾಗಿ ಮೋದಿ ಅವರು ಮಾಡಿದ ಕೆಲಸಗಳು ಮತ್ತು ಅವರ ನಾಯಕತ್ವದಲ್ಲಿ ಜನ ವಿಶ್ವಾಸ ಇಟ್ಟಿದ್ದಾರೆ. ಹಾಗಾಗಿ, ಲೋಕಸಭೆ ಚುನಾವಣೆಯಲ್ಲಿ ಅದರ ಪರಿಣಾಮ ನಿಶ್ಚಿತವಾಗಿ ಆಗಲಿದೆ ಎಂದು ಅಭಯ್ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಅಸಮಾಧಾನ ಶಮನ : ಬೆಳಗಾವಿ ಬಿಜೆಪಿ ನಾಯಕರ ಭಿನ್ನಮತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಭಯ್ ಪಾಟೀಲ್, ಬೈಕ್ ರ್‍ಯಾಲಿಯಲ್ಲಿ ಅಸಮಾಧಾನ ಶಮನವಾಗಿ ಎಲ್ಲರೂ ಗಟ್ಟಿಯಾಗಿ ಕೆಲಸ ಮಾಡ್ತಿದ್ದಾರೆ ಎಂದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸತೀಶ್ ಜಾರಿಹೊಳಿ ಕುರಿತು ಕೇಳಿದ ಪ್ರಶ್ನೆಗೆ ಬೇರೆ ವಿಷಯ ಇದ್ದರೆ ಕೇಳಿ ಎಂದರು.
ಚುನಾವಣೆಯಲ್ಲಿ ನಾನು ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುತ್ತೇನೆ ಎಂಬ ಅಭಯ್ ಪಾಟೀಲ್ ಹೇಳಿಕೆ ವೈರಲ್ ವಿಚಾರಕ್ಕೆ ಅದು ವಿಡಿಯೋ ಕಟ್ ಅಂಡ್ ಪೇಸ್ಟ್ ಇದೆ. ನಾನು ಹಿರೇಬಾಗೇವಾಡಿ ಶಾಸಕ ಇದ್ದಾಗ ಬಹಳ ಸಂಘಟನೆ ಮಾಡಿದ್ದೇನೆ. ಈಗ ಕಡಿಮೆ ಓಡಾಡುತ್ತಿದ್ದೇನೆ ಎಂದಿದ್ದನ್ನು ಕಟ್ ಮಾಡಿ ಜೋಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಮತ್ತು ಅವರ ತಾಯಿ ಬೆಳಗಾವಿ ಉತ್ತರ, ಗ್ರಾಮೀಣ ಕ್ಷೇತ್ರದಲ್ಲಿ ಕೇಸರಿ ಧ್ವಜ ಹಿಡಿದು ಓಡಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಪುತ್ರ ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ ಇದೇ ವೇಳೆ ಅಭಯ್ ಪಾಟೀಲ ಕುಟುಕಿದರು. ಇನ್ನು ಸಿದ್ದರಾಮಯ್ಯ ಭಗವಾ ಪೇಟಾ ತೆಗೆದಿರೋದನ್ನು ಇವರು ಖಂಡಿಸುತ್ತಾರಾ ಎಂದು ಪ್ರಶ್ನಿಸಿದರು.
ಹೆಬ್ಬಾಳ್ಕರ್ಗೆ ತಿರುಗೇಟು : ಮನೆ ಮಗ ವರ್ಸಸ್ ಹೊರಗಿನವರು ಎಂಬ ಹೇಳಿಕೆಗೆ ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರು ಅಭ್ಯರ್ಥಿ. ನಾವು ಕೂಡ ಮನೆ ಮಕ್ಕಳು, ಬಿಜೆಪಿಯಲ್ಲಿ ಇರುವ ಪ್ರತಿಯೊಬ್ಬರೂ ಅಭ್ಯರ್ಥಿಗಳೇ, ಸ್ವಾಭಿಮಾನದ ಬಗ್ಗೆ ಚರ್ಚಿಸಲು ಇಡೀ ದಿನ ಬೇಕಾಗುತ್ತದೆ. ಸೋನಿಯಾ ಗಾಂಧಿ ಇಲ್ಲಿ ಬಂದು ನಿಂತಾಗ ಇವರ ಸ್ವಾಭಿಮಾನ ಎಲ್ಲಿ ಹೋಗಿತ್ತು..? ಭಾಷಣ ಮಾಡುವಾಗ, ಬೇರೆ ಬೇರೆ ರಾಜ್ಯದವರು ರಾಜ್ಯಸಭಾ ಸದಸ್ಯರಾಗುವಾಗ ಸ್ವಾಭಿಮಾನ ಎಲ್ಲಿ ಹೋಗಿತ್ತು.? ಹೀಗಾಗಿ ಅದರ ಬಗ್ಗೆ ಚರ್ಚೆ ಬೇಡ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ ಎಂದು ಲಕ್ಷ್ಮೀ ಹೆಬ್ಬಾಳ್ಕರ್ಗೆ ಅಭಯ ತಿರುಗೇಟು ಕೊಟ್ಟರು.
ಕಾಂಗ್ರೆಸ್ಗೆ ವೋಟ್ ಹಾಕಿದರೆ ರಾಹುಲ್ ಗಾಂಧಿಗೆ ಹೋಗುತ್ತದೆ. ಬಿಜೆಪಿಗೆ ವೋಟ್ ಹಾಕಿದರೆ ಮೋದಿಗೆ ಹೋಗುತ್ತದೆ. ಇದನ್ನೆಲ್ಲವನ್ನು ಜನರು ನಿರ್ಣಯ ಮಾಡ್ತಾರೆ. ಬೆಳಗಾವಿ ದಕ್ಷಿಣದಲ್ಲಿ ಜಗದೀಶ ಶೆಟ್ಟರ್ ಅವರಿಗೆ ಅತಿಹೆಚ್ಚು ಲೀಡ್ ಕೊಡ್ತೇನಿ ಎಂದು ಅಭಯ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.