ಶಿವಮೊಗ್ಗ: ವಿಪಕ್ಷಗಳ ಮೈತ್ರಿಕೂಟದಲ್ಲಿ ಪ್ರಧಾನಿಯಾಗಬೇಕೆಂಬ ಬಯಕೆ ಎಲ್ಲರಿಗೂ ಇದೆ. ಲಾಲು ಪ್ರಸಾದ್ ಯಾದವ್, ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ಸ್ಟಾಲಿನ್ಗೆ ಪ್ರಧಾನಿಯಾಗಬೇಕೆಂಬ ಆಸೆ ಇದೆ. ಜೊತೆಗೆ ರಾಹುಲ್ ಗಾಂಧಿಯವರಿಗೆ ಕಳೆದ 20 ವರ್ಷಗಳಿಂದ ಪ್ರಧಾನಿಯಾಗಬೇಕೆಂಬ ಬಯಕೆ ಇದೆ. ಇಂಡಿಯಾ ಮೈತ್ರಿಕೂಟ 8 ತಿಂಗಳಿಂದ ಪ್ರಧಾನಿ ಅಭ್ಯರ್ಥಿಯನ್ನು ಹುಡುಕುತ್ತಿದೆ. ದೇಶದಲ್ಲಿ ಮೊದಲ ಹಂತದ ಮತದಾನ ನಡೆದಿದೆ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾರೆಂದು ಗೊತ್ತಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.
ಭದ್ರಾವತಿಯ ಕನಕ ಮಂಟಪದಲ್ಲಿ ಬುಧವಾರ ಬಿಜೆಪಿ ಪರವಾಗಿ ಮತ ಪ್ರಚಾರದ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೌನ್ ಬನೇಗಾ ಕರೋಡ್ ಪತಿ ಎಂಬ ಮಾತಿದೆ, ಅದರಂತೆ ಇಂಡಿಯಾ ಮೈತ್ರಿಕೂಟದಲ್ಲಿ ಈಗ ಕೌನ್ ಬನೇಗಾ ಪ್ರಧಾನಮಂತ್ರಿ ಎಂಬಂತಾಗಿದೆ. ಈ ದೇಶಕ್ಕೆ ಪ್ರಧಾನಮಂತ್ರಿ ಬಹಳ ಮುಖ್ಯ, ಪ್ರಧಾನಿಯಾಗುವ ವ್ಯಕ್ತಿ ಯಾರು, ಆತನ ಪ್ಲಸ್ - ಮೈನಸ್ ಏನು ಎಂದು ಗೊತ್ತಿರಬೇಕು. 10 ವರ್ಷ ಪ್ರಧಾನಿಯಾಗಿದ್ದ ಮೋದಿಯವರಿಗೆ ಮತ್ತೊಂದು ಐದು ವರ್ಷ ಅಧಿಕಾರಿ ಕೊಡಲು ನಾವೆಲ್ಲ ತಯಾರಾಗಿದ್ದೇವೆ. ಮೋದಿಯವರಿಗಿಂತ ಮುಂಚೆ ದೇಶದಲ್ಲಿ ಯಾರೊಬ್ಬ ದೊಡ್ಡ ಲೀಡರ್ ಇರಲಿಲ್ಲ. 2014ರಲ್ಲಿ ನ್ಯಾಷನಲ್ ಲೀಡರ್ ಆಗಿ ಮೋದಿಯವರು ಪ್ರಧಾನಮಂತ್ರಿಯಾಗಿದ್ದರು ಎಂದು ಹೇಳಿದರು.
2024ರಲ್ಲಿ ಮೋದಿಯವರು ಇಂಟರ್ನ್ಯಾಚನಲ್ ಲೀಡರ್ ಆಗಿ ನಮ್ಮ ಮುಂದೆ ಇದ್ದಾರೆ. ಪಕ್ಷದಲ್ಲಿ ಬಹಳ ವರ್ಷ ಕೆಲಸ ಮಾಡಿದವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಸಣ್ಣ ಪುಟ್ಟ ಕೋಪ ಇದೆ. ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು ನಾವು ಹಾಕುವ ಒಂದೊಂದು ಮತ ಮೋದಿಯವರಿಗೆ ಸೇರಬೇಕು. ರಾಘವೇಂದ್ರ ಅವರನ್ನು 4 ಲಕ್ಷ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಡೆಲ್ಲಿಗೆ ಕಳುಹಿಸಬೇಕೆಂದು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ವಿಎಸ್ಐಎಲ್ಗೆ ಬೀಗ ಹಾಕುವ ಪರಿಸ್ಥಿತಿ ಎದುರಾದಾಗ ನಾವು ಬೀಗ ಹಾಕಲು ಬಿಟ್ಟಿಲ್ಲ. ಎಂಪಿಎಂಗೆ ಕೊನೆಯ ಮೊಳೆ ಹೊಡೆದಿದ್ದು ನಾವಲ್ಲ. ಸಿಎಂ ಸಿದ್ದರಾಮಯ್ಯ ಅವರು ಎಂಪಿಎಂ ಆಸ್ತಿಯನ್ನು 250 ಕೋಟಿಗೆ ಅಡ ಇಟ್ಟಿದ್ದರು. ಕೊನೆಗೆ ಯಡಿಯೂರಪ್ಪನವರು 70 ಕೋಟಿಗೆ ಸೆಟ್ಲಮೆಂಟ್ ಮಾಡಿ ಎಂಪಿಎಂ ಆಸ್ತಿಯನ್ನು ಉಳಿಸಿದರು ಎಂದು ಹೇಳಿದರು.
ಇದನ್ನೂ ಓದಿ: ಗ್ಯಾರಂಟಿಯಿಂದ ನಮ್ಮ ಸರ್ಕಾರ ದಿವಾಳಿಯಾಗಿದೆಯಾ? ಮೋದಿ ಸುಳ್ಳು ಹೇಳ್ತಾರೆ: ಸಿಎಂ ಸಿದ್ದರಾಮಯ್ಯ - CM Siddaramaiah