ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರ ಎಸ್ಐಟಿ ಕಸ್ಟಡಿ ಅವಧಿಯನ್ನ ಜುಲೈ 3ರವರೆಗೂ ವಿಸ್ತರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಸೂರಜ್ ರೇವಣ್ಣರನ್ನ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಮಹಜರು ಸಂದರ್ಭದಲ್ಲಿ ಆರೋಪಿಯ ಮೂಲ ಮೊಬೈಲ್ ಫೋನ್ ಹಾಗೂ ಕೆಲ ಕೂದಲಿನ ಮಾದರಿ ದೊರೆತಿರುವುದರಿಂದ, ಸೂರಜ್ ಅವರ ಧ್ವನಿ ಹಾಗೂ ಕೂದಲಿನ ಮಾದರಿಯನ್ನ ಪಡೆಯಬೇಕಿದೆ. ಆದ್ದರಿಂದ ಕನಿಷ್ಠ 4 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಆದರೆ 'ಧ್ವನಿ ಹಾಗೂ ಕೂದಲಿನ ಮಾದರಿ ಸಂಗ್ರಹಿಸಲು 4 ದಿನಗಳ ಕಸ್ಟಡಿ ಅಗತ್ಯವಿದೆಯಾ?' ಎಂದು ಪ್ರಶ್ನಿಸಿದ ನ್ಯಾಯಾಧೀಶರು, ಸೂರಜ್ ರೇವಣ್ಣ ಅವರ ಎಸ್ಐಟಿ ಕಸ್ಟಡಿಯನ್ನ ಜುಲೈ 3ರ ವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ.
ಜೂನ್ 23ರಂದು ಸೂರಜ್ ರೇವಣ್ಣ ಅವರನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ ಎಸ್ಐಟಿ ಅಧಿಕಾರಿಗಳು, ಏಳು ದಿನಗಳ ಕಾಲ ಕಸ್ಟಡಿ ಪಡೆದಿದ್ದರು. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಸೂರಜ್ ರೇವಣ್ಣ ಅವರನ್ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.
ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೂನ್ 22ರಂದು ಸೂರಜ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ ಜಾಮೀನು - Sexual Assault Case
ಆ ಬಳಿಕ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೂರಜ್ ವಿರುದ್ಧ ಮತ್ತೊಂದು ಎಫ್ಐಆರ್ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ದಾಖಲಾಗಿದೆ. ಸೂರಜ್ ಅವರ ಆಪ್ತನೇ ಈ ದೂರು ದಾಖಲಿಸಿದ್ದಾನೆ. ಇದೇ ವ್ಯಕ್ತಿಯು ಜೂನ್ 21ರಂದು ಸೂರಜ್ ಅವರಿಗೆ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಮೊದಲ ಸಂತ್ರಸ್ತ ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಬಳಿಕ ಇದೇ ವ್ಯಕ್ತಿ ಸೂರಜ್ ವಿರುದ್ಧ ದೂರು ನೀಡಿದ್ದಾನೆ.
ಸಂತ್ರಸ್ತನ ದೂರನ್ನು ಆಧಾರಿಸಿ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506ರಡಿ ಎಫ್ಐಆರ್ ದಾಖಲಾಗಿದೆ. ಅರಕಲಗೂಡು ಮೂಲದ ಯುವಕನ ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು. ಕೊರೊನಾ ಸಮಯದಲ್ಲಿ ತನ್ನ ಮೇಲೆ ಕೂಡ ಇದೇ ರೀತಿಯ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವನ್ನು ಸೂರಜ್ ಎಸಗಿದ್ದರು ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಬಳಿ ಫೋನೇ ಇಲ್ವಂತೆ!: ಕಾರಣವೇನು ಗೊತ್ತಾ? - cm siddaramaiah not having mobile