ಬಾಗಲಕೋಟೆ: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಂಯುಕ್ತಾ ಶಿವಾನಂದ ಪಾಟೀಲ್ ಹೆಸರು ಕೇಳಿ ಬಂದಿರುವ ಹಿನ್ನೆಲೆ ಕಾಶಪ್ಪನವರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹುನಗುಂದ ಮತಕ್ಷೇತ್ರದಿಂದ ಆಗಮಿಸಿದ್ದ ಬೆಂಗಲಿಗರು ಕೋಟ್೯ ವೃತ್ತದಿಂದ ಕಾಂಗ್ರೆಸ್ ಜಿಲ್ಲಾ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಗೋ ಬ್ಯಾಕ್ ಸಂಯುಕ್ತಾ ಪಾಟೀಲ್ ಎಂದು ಘೋಷಣೆ ಕೂಗಿದರು.
ನಂತರ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನಾ ನಿರತರನ್ನು ಪೊಲೀಸರು ತಡೆ ಹಿಡಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು. ನಂತರ ಕಾಂಗ್ರೆಸ್ ಜಿಲ್ಲಾ ಕಚೇರಿ ಎದುರು ಕಾರ್ಯಕರ್ತರು ಟೈರ್ಗೆ ಬೆಂಕಿ ಹಚ್ಚಿ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ತಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆ ಸುಧಾ ಪಾಟೀಲ ಮಾತನಾಡಿ, ಸಂಯುಕ್ತಾ ಪಾಟೀಲ ಯಾರು ಅಂತಲೇ ನಮಗೆ ಗೊತ್ತಿಲ್ಲ? ಐದು ವರ್ಷದಿಂದ ಇಲ್ಲಿ ಕೆಲಸ ಮಾಡಿಕೊಂಡು ಬಂದಿರುವ ವೀಣಾ ಕಾಶಪ್ಪನವರ ಅವರನ್ನು ಬಿಟ್ಟು ಬೇರೆ ಜಿಲ್ಲೆಯವರೆಗೆ ಟಿಕೆಟ್ ಕೊಟ್ಟರೆ, ನಿಜವಾದ ಕಾರ್ಯಕರ್ತರ ಗತಿ ಏನು, ಹಣದ ಆಸೆಗಾಗಿ ಮುಖಂಡರು ಟಿಕೆಟ್ ಮಾರಾಟ ಮಾಡಿದರೆ, ನಿಜವಾದ ಕಾರ್ಯಕರ್ತರಿಗೆ ನೋವು ಆಗುತ್ತಿದೆ. ಈ ಕೂಡಲೇ ಸಂಯುಕ್ತಾ ಪಾಟೀಲ್ ಅವರನ್ನು ಬಿಟ್ಟು ವೀಣಾ ಕಾಶಪ್ಪನವರ ಅವರಿಗೆ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಅನ್ನು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಎಲ್ಲ ಶಾಸಕರ ಮನೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ರವಾನಿಸಿದರು.
ಕಾಶಪ್ಪನವರ ಬೆಂಬಲಿಗ ಅಮರೇಶ ನಾಗೂರ ಮಾತನಾಡಿ, ವಿಧಾನಸಭೆಯ ಚುನಾವಣೆ ಸಮಯದಲ್ಲಿ ಎಲ್ಲ ಶಾಸಕರು ವೀಣಾ ಕಾಶಪ್ಪನವರು ಬೆಂಬಲಿಸಿದ್ದರಿಂದ ಗೆಲುವು ಸಾಧಿಸಿದ್ದಾರೆ. ಆದರೆ ಈಗ ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾಶಪ್ಪನವರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮನವಿ ಸಲ್ಲಿಸಿ, ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು. ಬೇರೆ ಜಿಲ್ಲೆಯವರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಮುತ್ತಪ್ಪ ಕಲಗೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ದೊಡ್ಡಮನಿ, ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂಓದಿ:ಜೆಡಿಎಸ್, ದೇವೇಗೌಡರನ್ನು ದೇಶ ಗುರುತಿಸುವಂತೆ ಮಾಡಿದ್ದು ಕಾಂಗ್ರೆಸ್: ಸಂಸದ ಡಿ.ಕೆ.ಸುರೇಶ್ ತಿರುಗೇಟು