ಬೆಂಗಳೂರು: "ನಾವು ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ದೇಶದ್ರೋಹದ ಕೆಲಸ ಯಾರೇ ಮಾಡಿದ್ದರೂ ಅವರ ವಿರುದ್ಧ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರವಾಗಿ ಮೂವರ ಬಂಧನ ಕುರಿತು ಪ್ರತಿಕ್ರಿಯಿಸಿ, "ಈಗ ಅಧಿಕೃತವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಬಿಜೆಪಿಯವರು ಈ ಬಗ್ಗೆ ಮಾತಾಡ್ತಾನೇ ಇರ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲ್ಲ. ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಾವು ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದ್ದೇವೆ. ನಿನ್ನೆ ಮಧ್ಯಾಹ್ನವೇ ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಾಯ್ಸ್ ಟೆಸ್ಟ್ ಕೂಡ ಮಾಡಲಾಗುತ್ತಿದೆ" ಎಂದು ತಿಳಿಸಿದರು.
"ವಾಯ್ಸ್ ಮ್ಯಾಚ್ ಆಗಬೇಕು, ಹಾಗಾಗಿ ತನಿಖೆ ನಡೆಯುತ್ತಿದೆ. ಬಿಜೆಪಿ ನಾಯಕರು ಪೊಲೀಸರಿಗೆ ಹೇಗೆ ತನಿಖೆ ಮಾಡಬೇಕು ಎನ್ನುವುದನ್ನು ಹೇಳಿಕೊಡಲಿ, ಪೊಲೀಸರು ಹಾಗೆಯೇ ಮಾಡುತ್ತಾರೆ. ಬೇರೆಯವರು ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ ಪೊಲೀಸರ ಅಭಿಪ್ರಾಯ ಬಹಳ ಮುಖ್ಯ. ವಾಯ್ಸ್ ಸ್ಯಾಂಪಲ್ ಬಹಳ ಮುಖ್ಯ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಮಂಡ್ಯ ಬಿಜೆಪಿ ಕಾರ್ಯಕರ್ತನ ಪ್ರಕರಣ ಕೂಡ ತನಿಖೆ ಆಗುತ್ತಿದೆ. ಮೊದಲು ಬಿಜೆಪಿಯವರು ಮಂಡ್ಯ ಘಟನೆ ಬಗ್ಗೆ ಮಾತನಾಡಲಿ. ಆ ಬಗ್ಗೆ ನಮ್ಮ ನಾಯಕರು ಬಾಯಿ ಮುಚ್ಚಿದ್ದಾರೆ" ಎಂದರು.
ಸುರ್ಜೇವಾಲ ಜೊತೆಗೆ ಸಿಎಂ, ಡಿಸಿಎಂ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, "ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. 4,000 ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಬೇಕು. ಇದರ ಜೊತೆಗೆ ಬೇರೆಯದು ಸೇರಿ ಒಟ್ಟು ಏಳೆಂಟು ಸಾವಿರ ಜನರಿಗೆ ನಾಮನಿರ್ದೇಶನ ಮಾಡಬೇಕು. ಇದರ ಬಗ್ಗೆ ನಾನು ಸಿಎಂ ಮಾತನಾಡಿದ್ದೇವೆ. 7ನೇ ತಾರೀಖು ದೆಹಲಿಯಲ್ಲಿ CEC ಸಭೆ ನಡೆಯುತ್ತದೆ. ಆ ಸಭೆಗೆ ನಾನು ಮತ್ತು ಸಿಎಂ ಹೋಗುತ್ತೇವೆ. ಲೋಕಸಭಾ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನು ಪೈನಲ್ ಮಾಡುತ್ತೇವೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ಎಫ್ಎಸ್ಎಲ್ ವರದಿಯಲ್ಲಿ ದೃಢ: ಸಚಿವ ಪರಮೇಶ್ವರ್