ಶಿವಮೊಗ್ಗ: ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆ ಸಂಘರ್ಷ ನಡೆಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಗಾಲದಲ್ಲಿ ರೈತರ ಸಂಕಷ್ಟದ ಕುರಿತು ಸರಿಯಾದ ಕ್ರಮ ತೆಗೆದುಕೊಳ್ಳದೆ, ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಮಾಡಿಕೊಳ್ಳುತ್ತಿದೆ. ನಿರೀಕ್ಷಿಸಿದಂತೆ ಮಳೆ ಸರಿಯಾಗಿ ಬಂದಿಲ್ಲ. ರಾಜ್ಯ ಸರ್ಕಾರ ಬರಗಾಲಕ್ಕೆ ಪರಿಹಾರ ನೀಡದೆ ಘೋಷಣೆಗೆ ಸೀಮತವಾಗಿದೆ. ಕೇಂದ್ರದ ತಂಡ ಬರಗಾಲವನ್ನು ವೀಕ್ಷಣೆ ನಡೆಸಿ, ಹಣ ಬಿಡುಗಡೆ ಮಾಡಲಿಲ್ಲ ಎಂದು ಹೇಳಿತು. ಅದಕ್ಕೂ ಮುನ್ನ ನನ್ನ ತೆರಿಗೆ ನನ್ನ ಹಕ್ಕು ಎಂದು ಪ್ರತಿಭಟನೆ ನಡೆಸಿತ್ತು. ಗ್ಯಾರಂಟಿ ಭಜನೆ ಬಿಟ್ಟು ಬೇರೆ ವಿಷಯ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಹಾಗೂ ಪ್ರಧಾನ ಮಂತ್ರಿಗಳ ಮೇಲೆ ವಾಗ್ದಾಳಿ ನಡೆಸಿ, ಸಂಘರ್ಷವನ್ನುಂಟು ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲ. ರಾಜ್ಯ ಸರ್ಕಾರ ನೀಡಿರುವ 2 ಸಾವಿರ ರೂ. ಹಣ ಇನ್ನೂ ರೈತರಿಗೆ ತಲುಪಿಲ್ಲ. ರೈತರ ಸಂಕಷ್ಟಗಳಿಗೆ ಪ್ರಾಮಾಣಿಕ ಸ್ಪಂದನೆ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದಕ್ಣಿಣ ಭಾರತದ ಸರ್ಕಾರಗಳು ಕೋರ್ಟ್ಗೆ ಹೋಗುತ್ತಿರುವುದು ಸರಿಯಲ್ಲ: ದಕ್ಷಿಣ ಭಾರತದ ಸರ್ಕಾರಗಳು ಕೋರ್ಟ್ಗೆ ಹೋಗಿ ಅಹವಾಲು ನೀಡುತ್ತಿರುವುದು ಸರಿಯಲ್ಲ. ಅಂಬೇಡ್ಕರ್ ಬರೆದ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸದನದಲ್ಲಿ ಚರ್ಚೆ ನಡೆಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಬರದ ಕುರಿತು ಹಣ ಬಿಡುಗಡೆ ಮಾಡಿದೆ. ಆದರೆ ಇದಕ್ಕೆ ರಾಜ್ಯ ಕಾಂಗ್ರೆಸ್ ಈ ಹಣ ಬಹಳ ಕಡಿಮೆಯಾಯಿತು ಎಂದು ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದೆ. ರಾಜ್ಯ ಸರ್ಕಾರಕ್ಕೆ ಚೊಂಬು ಬಹಳ ಇಷ್ಟವಾಗಿದೆ ಎಂದೆನ್ನಿಸುತ್ತದೆ ಎಂದರು.
ಖಜಾನೆ ಖಾಲಿ ಮಾಡಿ ಖಾಲಿ ಚೊಂಬು ಮಾಡಿದ್ದಾರೆ. ಗ್ಯಾರಂಟಿ ವಿಚಾರದಲ್ಲಿ ಅನೇಕ ತೆರಿಗೆ ಏರಿಕೆ ಮಾಡಿ, ಜನತೆಯ ಮೇಲೆ ಹೊರೆಸುತ್ತಿದ್ದಾರೆ. ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಸದ್ಬಳಕೆ ಮಾಡುವುದನ್ನು ಬಿಟ್ಟು ನಿನ್ನೆ ಮತ್ತೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸಂಘರ್ಷದ ಮೂಲಕ ಇವರು ಏನ್ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
18,700 ಕೋಟಿ ರೂ. ಪರಿಹಾರ ಕೇಳಿದ್ದಾಗ, ಎನ್ಡಿಆರ್ಎಫ್ನಲ್ಲಿ 4,800 ಕೋಟಿ ರೂ. ಬರುತ್ತದೆ ಎಂದು ಸಿಎಂ ಹಿಂದೆ ಹೇಳಿದ್ದರು. ಎನ್ಡಿಆರ್ಎಫ್ ನಿಯಮದ ಪ್ರಕಾರ ಕೇಂದ್ರ ಸರ್ಕಾರ ಹಣ ನೀಡುತ್ತದೆ ಎಂದು ನಾನು ಹೇಳಿದ್ದಕ್ಕೆ ನನ್ನನ್ನು ನಾಡ ದ್ರೋಹಿಗಳು ಎಂದು ಹೇಳಿದ್ದಾರೆ. ಮುಂದೆ ರಾಜ್ಯದ ಜನತೆಗೆ ಯಾರು ನಾಡ ದ್ರೋಹಿ ಅನ್ನೋದು ತಿಳಿಯಲದೆ ಎಂದರು. ಈಗ ಚುನಾವಣೆ ಮುಗಿದ ಮೇಲೆ ಹೇಗೆ ಹಣ ನೀಡುತ್ತಾರೆ ಎಂದು ಇನ್ನೂ ಅವರು ನಿರ್ಧಾರ ಮಾಡಿಲ್ಲ. ಹಿಂದೆ ಬಿಜೆಪಿ ಅವರು ಅಡಿಷನಲ್ ಆಗಿ 10 ಸಾವಿರ ಕೋಟಿ ರೂ. ಹಣ ನೀಡಿದ್ದರು. ಅಪಪ್ರಚಾರ ನಡೆಸಲು ಧರಣಿ ನಡೆಸುತ್ತಿದ್ದಾರೆ. ಸತ್ಯವನ್ನ ಹೇಳಬೇಕು ಎಂದು ಹೇಳಿದ ಗಾಂಧಿ ಮುಂದೆ ಸುಳ್ಳಿನ ಪ್ರತಿಭಟನೆ ನಡೆಸಿದ್ದಾರೆ. ಕೇರಳದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದರು.
ಹಿಂದೆ ಮನಮೋಹನ್ ಸಿಂಗ್ ಆಳ್ವಿಕೆ ಮಾಡಿದಾಗ ಬರಕ್ಕೆ 1,200 ಕೋಟಿ ರೂ. ನೀಡಿದ್ದರು. ಈಗ ಮೋದಿ ಸರ್ಕಾರ ಒಂದೇ ವರ್ಷದಲ್ಲಿ 3,800 ಕೋಟಿ ರೂ. ನೀಡಿದೆ. ನಿಮ್ಮ ವೈಫಲ್ಯವನ್ನು ಕೇಂದ್ರದ ಮೇಲೆ ಹಾಕುವುದು ಸರಿಯಲ್ಲ. ಮುಂದೆ ರಾಜ್ಯ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕಿದೆ ಎಂದರು.
ಗೃಹ ಸಚಿವರಾದ ಅಮಿತ್ ಶಾ ಅವರ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು. ಅದರೆ ಮಣಿಪುರದ ಗಲಭೆಯಿಂದ ಸಭೆ ನಡಸಲಿಲ್ಲ. ಆದರೆ ಇವರು ಯಾರು ಫಾಲೋಅಪ್ ಮಾಡಲಿಲ್ಲ. ಇಲ್ಲಿ ಹಣ ಬಿಡುಗಡೆ ಮಾಡಿದ ಬಗ್ಗೆ ತೃಪ್ತಿ ಪ್ರಶ್ನೆಯೇ ಬಂದಿಲ್ಲ. ಇಲ್ಲಿ ನಿಯಮವಾಳಿಗಳ ಪ್ರಕಾರವೇ ಹಣ ನೀಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಹೆಚ್ಡಿಕೆ ಸಂತಾಪ: ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರು ದಲಿತ ನಾಯಕ ಅಂತ ನಾನು ಹೇಳಲ್ಲ. ಅವರು ಒಬ್ಬ ಉತ್ತಮ ನಾಯಕ. ಒಳ್ಳೆಯ ಜನಪ್ರತಿನಿಧಿಯಾಗಿದ್ದರು. ಇವರ ಅಗಲಿಕೆ ತುಂಬ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.