ETV Bharat / state

ಹೊಸ ಕಾನೂನಿಗೆ ರಾಜ್ಯ ಸರ್ಕಾರದ ವಿರೋಧ, ಶೀಘ್ರವೇ ತಿದ್ದುಪಡಿಗೆ ನಿರ್ಧಾರ : ಸಚಿವ ಹೆಚ್ ಕೆ ಪಾಟೀಲ್ - MINISTER H K PATIL NEW LAWS

author img

By ETV Bharat Karnataka Team

Published : Jul 1, 2024, 7:16 PM IST

ಇಂದಿನಿಂದ ಜಾರಿಗೆ ಬರುತ್ತಿರುವ ಮೂರು ಕಾನೂನಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ ಎಂದು ಸಚಿವ ಹೆಚ್.​ ಕೆ ಪಾಟೀಲ್ ಅವರು ತಿಳಿಸಿದ್ದಾರೆ. ಈ ಬಗ್ಗೆ ಶೀಘ್ರವೇ ತಿದ್ದುಪಡಿಗೆ ನಿರ್ಧರಿಸಲಾಗುವುದು ಎಂದಿದ್ದಾರೆ.

minister-h-k-patil
ಸಚಿವ ಹೆಚ್ ಕೆ ಪಾಟೀಲ್ (ETV Bharat)

ಬೆಂಗಳೂರು: ಇಂದಿನಿಂದ ಜಾರಿಗೆ ಬರುತ್ತಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿದ್ದು, ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ಕಾನೂನು ಸಚಿವ ಹೆಚ್. ಕೆ ಪಾಟೀಲ್ ತಿಳಿಸಿದರು.

ಈ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಇಂದಿನಿಂದ ಜಾರಿಗೆ ಬಂದಿವೆ. ಆದರೆ, ಈ ಕಾನೂನುಗಳ ಸಮಗ್ರತೆ ಮತ್ತು ಭಾರತೀಯ ಮೌಲ್ಯಗಳನ್ನು ಮತ್ತು ಐತಿಹಾಸಿಕ ಕೆಲವು ಕಲಂಗಳನ್ನು ಎತ್ತಿಹಿಡಿಯಲು ಕೇಂದ್ರ ಸರ್ಕಾರ ಈ ಕಾನೂನು ರಚನೆ ಮಾಡುವ ಸಂದರ್ಭದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.

ಈ ಮೂರು ಕಾನೂನುಗಳನ್ನು ರಚನೆ ಮಾಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯ ಸಲಹೆ/ಸೂಚನೆಗಳನ್ನು ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸಲಹೆ-ಸೂಚನೆಗಳಿಗಾಗಿ ಕೋರಿದ್ದರು. ಈ ಮೂರು ಕಾನೂನುಗಳು ಜನರ ಬದುಕಿನ ದೃಷ್ಠಿಯಿಂದ ಹಾಗೂ ನ್ಯಾಯದಾನ ವ್ಯವಸ್ಥೆ ದೃಷ್ಟಿಯಿಂದ ಪ್ರಮುಖವಾದವುಗಳು ಎಂದು ಪರಿಗಣಿಸಿ, ಮುಖ್ಯಮಂತ್ರಿಗಳು ನನಗೆ ಪತ್ರ ಕಳುಹಿಸಿ ಈ ಮೂರು ಕರಡು ಕಾನೂನುಗಳ ಅಧ್ಯಯನ ಮಾಡಿ ಸೂಕ್ತವಾದ ಸಲಹೆಗಳನ್ನು ನೀಡಲು ಕೋರಿದ್ದರು.

ನನ್ನ ಅಧ್ಯಕ್ಷತೆಯಲ್ಲಿ ಕಾನೂನು ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು ಹಾಗೂ ನಿವೃತ್ತ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು, ನಿವೃತ್ತ ಡಿಜಿಪಿ, ಕಾನೂನು ತಜ್ಞರು, ವಿಶ್ವವಿದ್ಯಾಲಯದ ಮಟ್ಟದ ಪ್ರೊಫೆಸರ್​ಗಳು, ಹಿರಿಯ ವಕೀಲರನ್ನ ಒಳಗೊಂಡಂತೆ ತಜ್ಞರ ಸಮಿತಿ ಅಧ್ಯಯನ ಮಾಡಿ, ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವುಗಳ ಬಗ್ಗೆ ವಿವರವಾದ ವರದಿ ನೀಡಲಾಗಿತ್ತು ಎಂದರು.

ಮುಖ್ಯಮಂತ್ರಿಗಳು ಈ ಅಧ್ಯಯನ ಹಾಗೂ ತಜ್ಞ ಸಮಿತಿಯ ಸದಸ್ಯರ ವಿಶೇಷ ಅನುಭವದ ಹಿನ್ನೆಲೆ ಸಲಹೆ, ಸೂಚನೆ ಗಮನಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಕಳುಹಿಸಿ, ರಾಜ್ಯದ ಪರವಾಗಿ ವಿವರವಾದ ಶಿಫಾರಸ್ಸುಗಳನ್ನು ಕಳುಹಿಸಲಾಗಿರುವ ಬಗ್ಗೆ ವಿವರಿಸಿ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಕಳುಹಿಸಿದ ಬಹುತೇಕ ಸಲಹೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದೆ ತಾವು ಮಾಡಿದ ಕರಡನ್ನೇ ಯಥಾವತ್ತಾಗಿ ಜಾರಿಗೆ ತಂದಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಈ ಮೂರು ಶಾಸನಗಳನ್ನು ವಿರೋಧಿಸುವುದಲ್ಲದೇ ಈ ಮೂರು ಕಾನೂನುಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ವ್ಯಾಪ್ತಿಯಲ್ಲಿ ಹಲವಾರು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಸಚಿವ ಹೆಚ್​ ಕೆ ಪಾಟೀಲ್​ ಹೇಳಿದರು.‌

ಈ ಹೊಸ ಕಾನೂನಿನಲ್ಲಿ ಅನಾನುಕೂಲ ಆಗುವುದೇ ಹೆಚ್ಚು. ನ್ಯಾಯದಾನ ವ್ಯವಸ್ಥೆಯಲ್ಲಿ ಬಹಳ ಗೊಂದಲ, ಗೋಜಲು ಮೂಡಿಸುವ ತಿದ್ದುಪಡಿ ಇದಾಗಿದೆ. ನಮ್ಮ ಅಭಿಪ್ರಾಯವನ್ನು ಗಮನಿಸಿಲ್ಲ. ಜನಾಭಿಪ್ರಾಯ ನಿರ್ಲಕ್ಷಿಸಿ ಹೊಸ ಕಾನೂನು ಮಾಡಿದ್ದಾರೆ. ಈ ಸಂಬಂಧ ಆದಷ್ಟು ಬೇಗ ತಿದ್ದುಪಡಿ ಮಾಡುತ್ತೇವೆ. ಜನರಿಗೆ ಆಗುವ ತೊಂದರೆ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ. ಇದು ಕಂನ್ಕರೆಂಟ್ ಲಿಸ್ಟ್ ಗೆ ಬರುತ್ತದೆ. ಆರ್ಟಿಕಲ್ 7 ಲಿಸ್ಟ್ 3 ಅಧಿಕಾರ ಚಲಾಯಿಸಿ ರಾಜ್ಯ ತಿದ್ದುಪಡಿ ತರುವ ಅಧಿಕಾರ ಹೊಂದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ ತಿದ್ದುಪಡಿ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಹೊಸ ಕಾನೂನನ್ನೇ ರಚನೆ ಮಾಡುವ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಬದಿಗೊತ್ತಿ, ಚುನಾವಣೆಗಳು ಘೋಷಣೆಯಾಗಲು ಇನ್ನೂ ಕೆಲವೇ ದಿನಗಳು ಬಾಕಿಯಿರುವಂತೆ ಕಾನೂನುಗಳ ಅನುಷ್ಠಾನಗಳ ದಿನಾಂಕವನ್ನು ಹಿಂದಿನ ಸರ್ಕಾರದ ಕ್ಯಾಬಿನೆಟ್​ನಲ್ಲಿಯೇ ನಿರ್ಣಯಿಸಿ, ಗಂಭೀರ ಕಾನೂನಾತ್ಮಕ ಲೋಪ ಎಸಗಿದೆ.

ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಮೇಲೆ, ಈ ಹೊಸ ಸರ್ಕಾರ ಅನುಷ್ಠಾನಕ್ಕೆ ತರಬೇಕೆ ಬೇಡವೇ ಎಂಬ ಬಗ್ಗೆ ಮತ್ತು ಹಿಂದಿನ ಸರ್ಕಾರ ನಿರ್ಣಯಿಸಿದ ದಿನಾಂಕದಂದೇ ಜಾರಿಗೆ ತರಬೇಕೆ ಎಂಬ ಬಗ್ಗೆ ಕೇಂದ್ರದ ಹೊಸ ಸಚಿವ ಸಂಪುಟದಲ್ಲಿ ಚರ್ಚೆ ಆಗದೇ ಏಕಪಕ್ಷಿಯವಾಗಿ ಕೈಗೊಂಡ ನಿರ್ಣಯದ ಕ್ರಮದಿಂದ ಕಾನೂನಾತ್ಮಕ ಲೋಪವಾಗಿದೆ ಎಂದು ಸಚಿವರು ಆರೋಪಿಸಿದರು.

ಭಾರತೀಯ ನ್ಯಾಯ ಸಂಹಿತೆಯಲ್ಲಿ ಒಟ್ಟು 9 ಸಲಹೆಗಳನ್ನು ನಾವು ಕೊಟ್ಟಿದ್ದೆವು.‌ ಇನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ 9 ಸಲಹೆಗಳು ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳಡಿ 5 ಅಂಶಗಳು ಸೇರಿ ಒಟ್ಟು 23 ಸಲಹೆಗಳನ್ನು ನೀಡಿದ್ದೇವೆ.‌ ಈ 23 ಸಲಹೆಗಳನ್ನು ನಾವು ತಿದ್ದುಪಡಿ ಮಾಡಲು ಚಿಂತಿಸಿದ್ದೇವೆ ಎಂದರು.

ಯಾವೆಲ್ಲಾ ಪ್ರಮುಖ ಅಂಶಗಳ ಬಗ್ಗೆ ತಿದ್ದುಪಡಿ?

  • ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಹೆಚ್ಚು ಮಹತ್ವ ಮತ್ತು ಮೌಲ್ಯಯುತವಾದ ರೀತಿಯಲ್ಲಿ ಉಪವಾಸ ಸತ್ಯಾಗ್ರಹ ಪರಿಣಾಮಕಾರಿಯಾದ ಅಸ್ತ್ರವಾಗಿತ್ತು. ಈ ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆಗೆ ಯತ್ನವೆಂದು ಅಪರಾಧಿಕರಣಗೊಳಿಸಲಾಗುತ್ತಿದೆ. ಪ್ರಜಾಸತ್ತಾತ್ಮಕವಾದ ಪ್ರತಿಭಟನೆಯನ್ನು ಹತ್ತಿಕ್ಕಲು ಈ ಉಪವಾಸ ಸತ್ಯಾಗ್ರಹವನ್ನು ಅಪರಾಧಿಕರಣಗೊಳಿಸಲಾಗುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ತಡೆಯಲು ಸೂಕ್ತ ತಿದ್ದುಪಡಿಯನ್ನು ತರಲು ಚಿಂತನೆ.
  • ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಅಪಮಾನಿಸುವ, ಅನಾದರಿಸುವ ಮತ್ತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳಿಗೆ ಪ್ರಚೋದನಾತ್ಮಕ ಭಾಷೆ ಉಪಯೋಗಿಸುವ ಮೂಲಕ ಮಾಡುವ ಅಪಮಾನ, ಅನಾದರ, ತಿರಸ್ಕಾರಗಳನ್ನು ರಾಷ್ಟ್ರೀಯ ಐಕ್ಯತೆಯ ಮೇಲೆ ಪರಿಣಾಮ ಬೀರುವ ಅಪರಾಧಗಳೆಂದು ಪರಿಗಣಿಸುವ ನಿಟ್ಟಿನಲ್ಲಿ ತಿದ್ದುಪಡಿ ಚಿಂತನೆ.
  • ಸಂಘಟಿತ ಅಪರಾಧ ಎಂಬ ಹೊಸ ಅಪರಾಧವನ್ನು ಸೇರ್ಪಡೆ ಮಾಡಲಾಗಿದೆ. ಆದರೆ ಈ ಅಪರಾಧದ ವ್ಯಾಖ್ಯೆ ಅಸ್ಪಷ್ಟವಾಗಿದೆ ಮತ್ತು ಅಸಂಬದ್ಧವಾಗಿದೆ. ಇಂತಹ ಅಸ್ಪಷ್ಟ ಮತ್ತು ಪರಿಭಾವಿತ ವ್ಯಾಖ್ಯಾನಗಳನ್ನು ಆಧರಿಸಿ ವ್ಯಕ್ತಿಗಳ ಮೇಲೆ ಮೊಕದ್ದಮೆ ಹೂಡಲು ತನಿಖಾ ಸಂಸ್ಥೆಗಳಿಗೆ ಏಕಪಕ್ಷಿಯ ಮತ್ತು ವಿವೇಚನಾಧಿಕಾರವನ್ನು ನೀಡಿದೆ.
  • ಈ ವ್ಯಾಖ್ಯಾನವು ಭೂಕಬಳಿಕೆ, ಗುತ್ತಿಗೆ ಹತ್ಯೆ, ಸೈಬರ್ ಅಪರಾಧಗಳು, ಇತ್ಯಾದಿ ಹೊಸ ಪರಿಭಾಷೆಗಳನ್ನು ಉಪಯೋಗಿಸುತ್ತದೆ. ಆದರೆ ಈ ಪರಿಭಾಷೆಗಳನ್ನು ಹೊಸ ಕಾಯ್ದೆಯಲ್ಲಿ ಎಲ್ಲೂ ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿಲ್ಲ. ಸಣ್ಣಪುಟ್ಟ ಸಂಘಟಿತ ಅಪರಾಧಗಳೆಂದು ಪ್ರತ್ಯೇಕವಾಗಿ ಪರಿಗಣಿಸಿದೆ. ಆದರೆ ಎಲ್ಲಾ ಸಂಘಟಿತ ಅಪರಾಧಗಳನ್ನು ಸಮಾನವಾಗಿ ಪರಿಗಣಿಸಬೇಕಾದ ಅವಶ್ಯಕತೆಯಿದೆ. ಈ ಕುರಿತಾಗಿ ಸೂಕ್ತ ತಿದ್ದುಪಡಿ ಮಾಡಲು ಚಿಂತಿಸಲಾಗುತ್ತಿದೆ.
  • ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ ಕೇವಲ ಮೂರು ವರ್ಷಗಳ ಕಾರಾಗೃಹವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಿದೆ. ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ಈ ಕನಿಷ್ಠ ದಂಡನೆಯನ್ನು ವಿಧಿಸುವ ತಿದ್ದುಪಡಿಗೆ ಚಿಂತನೆ.
  • ಸೈಬರ್ ಅಪರಾಧಗಳಿಗೆ, ಹ್ಯಾಕಿಂಗ್, ಆರ್ಥಿಕ ಅಪರಾಧಗಳು, ಅಣ್ವಸ್ತ್ರ ಗೌಪ್ಯತೆಗಳನ್ನು ಬೇಹುಗಾರಿಕೆ ನಡೆಸುವ, ನಗದು ಸಂಗ್ರಹಿಸುವ, ಕರದಾತರ ಸ್ವರ್ಗವೆನಿಸುವ ರಾಷ್ಟ್ರಗಳಲ್ಲಿ ಹಣ ಹೂಡಿಕೆ ಮಾಡುವ ಮತ್ತು ತಂತ್ರಜ್ಞಾನದ ಮೂಲಕ ವಿಧ್ವಂಸಕ ಕೃತ್ಯವೆಸಗುವ ಇತ್ಯಾದಿ ಅಪರಾಧಿಗಳಿಗೆ ಪ್ರತ್ಯೇಕ ಅಧ್ಯಾಯದ ಮೂಲಕ ವ್ಯವಹರಿಸಲು ತಿದ್ದುಪಡಿ.
  • ಮೃತದೇಹದ ಮೇಲೆ ಎಸಗಲಾಗುವ ಅತ್ಯಾಚಾರ ಮತ್ತು ಮೃತ ವ್ಯಕ್ತಿಗೆ ತೋರುವ ಅಗೌರವಗಳನ್ನು ಅಪರಾಧಿಕರಣಗೊಳಿಸಲು ತಿದ್ದುಪಡಿಗೆ ಚಿಂತನೆ.
  • ಹೊಸ ಕಾಯ್ದೆಯಡಿಯಲ್ಲಿ ಪೊಲೀಸ್ ಕಸ್ಟಡಿ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಆದ್ದರಿಂದ ಇದನ್ನು ಸೂಕ್ತವಾಗಿ ಅತ್ಯಂತ ಕಡಿಮೆ ಮತ್ತು ಮಿತವಾದ ಸಮಯಕ್ಕೆ ಕಡಿತಗೊಳಿಸಲು ತಿದ್ದುಪಡಿಗೆ ಚಿಂತನೆ.
  • ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿತರಾದ ವ್ಯಕ್ತಿಗಳ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಲು ಪೊಲೀಸರಿಗೆ ನೀಡಲಾಗಿರುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಲು ತಿದ್ದುಪಡಿಗೆ ಚಿಂತನೆ.

ಇದನ್ನೂ ಓದಿ : ಇವತ್ತಿನಿಂದ ಎಲ್ಲಾ ದೂರುಗಳು ಹೊಸ ಅಪರಾಧ ಕಾನೂನಿನಡಿ ದಾಖಲು: ಸಚಿವ ಜಿ. ಪರಮೇಶ್ವರ್ - New Criminal Law

ETV Bharat Logo

Copyright © 2024 Ushodaya Enterprises Pvt. Ltd., All Rights Reserved.