ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಸ್ವಾಧೀನಕ್ಕೆ ಪಡೆದಿರುವ ಶಸ್ತ್ರಾಸ್ತ್ರಗಳಲ್ಲಿ ಕಾಡುಪ್ರಾಣಿಗಳಿಂದ ಆತ್ಮರಕ್ಷಣೆಗೆ ಶಸ್ತ್ರಾಸ್ತ್ರ ಅಗತ್ಯವಿರುವವರು ಮನವಿ ಸಲ್ಲಿಸಿದಲ್ಲಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವುದಾಗಿ ಹೈಕೋರ್ಟ್ಗೆ ಸರ್ಕಾರ ಮಾಹಿತಿ ನೀಡಿದೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕಾಂತಲಡ್ಕ ಕುಲ್ಲಂಪಾಡಿ ನಿವಾಸಿ ಪ್ರಸಾದ್ ಕೆ.ವಿ. ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾಣಿಗಳಿಂದ ಆತ್ಮರಕ್ಷಣೆಗೆ ಬಂದೂಕಿನ ಅಗತ್ಯವಿದ್ದು, ಬಂದೂಕು ತಂದೊಪ್ಪಿಸಲು ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು. ಈಗಾಗಲೇ ಸರ್ಕಾರದ ಸುಪರ್ದಿಗೆ ನೀಡಿರುವ ಬಂದೂಕನ್ನು ಹಿಂದಿರುಗಿಸಲು ಸೂಚನೆ ನೀಡಬೇಕು ಎಂದು ಕೋರಿದರು. ಈ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಅಗತ್ಯವಿರುವವರು ಮನವಿ ಸಲ್ಲಿಸಿದರೆ, ಅದನ್ನು ಪರಿಗಣಿಸಿ ಸೂಕ್ತ ಆದೇಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ಮನವಿ ಸಲ್ಲಿಸಿದರೆ, ಎರಡು ದಿನಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರು ತಮ್ಮ ಪರವಾನಗಿ ಪಡೆದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿಂದ ವಿನಾಯಿತಿ ಕೋರಿ ಕೋರಿದ್ದ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಚುನಾವಣಾ ಆಯೋಗದ ಈ ಆದೇಶ ಶಸ್ತ್ರಾಸ್ತ್ರ ಕಾಯಿದೆ 1959 ಮತ್ತು ಅದರ ನಿಯಮಗಳಿಗೆ ವಿರುದ್ಧವಾಗಿದ್ದು, ಸಂವಿಧಾನ ಬಾಹಿರವಾಗಿದೆ. ಜತೆಗೆ, ಅರ್ಜಿದಾರರು ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿಲ್ಲ. ಹೀಗಾಗಿ ಚುನಾವಣಾ ಆಯೋಗ ಹೊರಡಿಸಿದ ಸುತ್ತೋಲೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದರು.
ಇದನ್ನೂ ಓದಿ: ಅಪಾಯಕಾರಿ ಶ್ವಾನ ತಳಿಗಳ ಸಂತಾನೋತ್ಪತ್ತಿ ನಿಷೇಧಿಸಿದ್ದ ಕೇಂದ್ರದ ಸುತ್ತೋಲೆ ರದ್ದುಗೊಳಿಸಿದ ಹೈಕೋರ್ಟ್ - Dangerous Dog Breeds