ಬೆಂಗಳೂರು: ಕೇಂದ್ರ ಸರ್ಕಾರ ಅಲ್ಪ ಪ್ರಮಾಣದಲ್ಲಿ ಬರ ಪರಿಹಾರ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಇಂದು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.
ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, "ಬರ ಪರಿಹಾರ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ಅನಿವಾರ್ಯವಾಗಿ ನಾವು ಕೋರ್ಟ್ಗೆ ಹೋಗಬೇಕಾಯ್ತು. ನಾವೇನೂ ಭಿಕ್ಷೆ ಕೇಳುತ್ತಿಲ್ಲ. ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಮೇಲೆ ಈಗ 3 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಇದು ಬಹಳ ಕಡಿಮೆ ಪರಿಹಾರ ಮೊತ್ತ. ಬರ ಪರಿಹಾರ ವಿಚಾರದಲ್ಲಿ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿದ್ದಾರೆ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ. ಇದರ ಜೊತೆಗೆ ಈಗ ಜೆಡಿಎಸ್ ಸಹ ಸೇರಿಕೊಂಡಿದೆ. ಈಗ 19%ಕ್ಕಿಂತ ಕಡಿಮೆ ಹಣ ಕೊಟ್ಟಿದ್ದಾರೆ. ಇದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ" ಎಂದರು.
"ಇನ್ನೂ 14,718 ಕೋಟಿ ಬಾಕಿ ಇದೆ. ನಾವು ರೈತರಿಗಾಗಿ ಹಣ ಕೇಳಿದ್ದೇವೆಯೇ ಹೊರತು ಗ್ಯಾರಂಟಿಗೆ ಅಲ್ಲ. ಪ್ರತಿವರ್ಷ 4.5 ಲಕ್ಷ ತೆರಿಗೆ ನಾವು ಕಟ್ಟುತ್ತಿದ್ದೇವೆ" ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್-ಬಿಜೆಪಿ ನಾಡದ್ರೋಹಿಗಳು-ಡಿಕೆಶಿ: ಪ್ರತಿಭಟನೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, "ನಾವು ರಾಜ್ಯದ ಜನರಿಗೆ ಹಣ ಕೇಳುತ್ತಿದ್ದೇವೆ. ಸಿದ್ದರಾಮಯ್ಯರಿಗಾಗಲಿ, ನನಗಾಗಲಿ ವೈಯಕ್ತಿಕವಾಗಿ ಹಣ ಕೇಳುತ್ತಿದ್ದೇವಾ?. ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ. ಅದನ್ನು ಸರಿ ಮಾಡಿ ಎಂದು ಕೇಳಿದ್ದೇವೆ. ನಾವು ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಕೊಟ್ಟಿದ್ದೇವೆ. ರೈತರಿಗೆ ತಲಾ 2,000 ರೂ., ಮೇವಿಗಾಗಿ ನಮ್ಮ ಸರ್ಕಾರದಿಂದ ಹಣ ಕೊಟ್ಟಿದ್ದೇವೆ. ಅದೆಲ್ಲಾ ಲೆಕ್ಕ ಹಾಕಿದರೆ 50,000 ಸಾವಿರ ಕೋಟಿ ರೂ. ಆಗುತ್ತೆ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಸೆಪ್ಟೆಂಬರ್‌ನಿಂದ ಇಲ್ಲಿವರೆಗೆ ಆದ ನಷ್ಟವನ್ನು ಕೇಂದ್ರ ಸರ್ಕಾರ ಕೊಡಬೇಕು. ಅಲ್ಲಿವರೆಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಹೇಳಿದರು.
ಲಾಲಿಪಾಪ್ ಕೊಟ್ಟಿದ್ದಾರೆ-ರಣದೀಪ್ ಸಿಂಗ್ ಸುರ್ಜೇವಾಲ:-ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, "ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಸಿಎಂ ಭೇಟಿ ಮಾಡಿದ್ದರು. ಆದರೆ ರೈತರಿಗೆ ಪರಿಹಾರ ಬಿಡುಗಡೆ ಮಾಡಿಲ್ಲ. ನಮ್ಮ ಎಲ್ಲಾ ಸಂಪುಟ ಸಚಿವರು ದೆಹಲಿಯಲ್ಲಿ ಪ್ರತಿಭಟನೆ ಮಾಡಿದೆವು. ಕೊನೆಗೆ ಅನ್ಯಮಾರ್ಗ ಇಲ್ಲದೆ ಸುಪ್ರೀಂ ಕೋರ್ಟ್ಗೆ ಹೋದೆವು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಮೇಲೆ ಈಗ ಕೇಳಿದ ಪರಿಹಾರದ ಪೈಕಿ 20% ಮಾತ್ರ ಕೊಟ್ಟಿದ್ದಾರೆ. ಈ ಲಾಲಿಪಾಪ್ ಅನ್ನು ಮೋದಿ ಕೊಟ್ಟಿದ್ದಾರೆ. ಎನ್‌ಡಿಆರ್‌ಎಫ್ ಹಣ ರಾಜ್ಯದ ಜನರ ಹಣ. ನಮಗೆ 18,172 ಕೋಟಿ ರೂ. ಕೊಡಬೇಕು. ಹಾಗಾದರೆ ಮಾತ್ರ ಬರಕ್ಕೆ ಪರಿಹಾರ ನೀಡಿದಂತಾಗುತ್ತದೆ" ಎಂದರು.
ಸಚಿವರಾದ ಕೃಷ್ಣ ಬೈರೇಗೌಡ, ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಎಂ.ಸಿ.ಸುಧಾಕರ್, ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಕೇಂದ್ರದ ವಿರುದ್ಧ ಪ್ಲಕಾರ್ಡ್ಗಳನ್ನು ಹಿಡಿದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಪ್ರಧಾನಿ ಮೋದಿ ವಿರುದ್ಧ "ಖಾಲಿ ಚೊಂಬು ಕೊಟ್ಟ ಪಾರ್ಟಿ ಬಿಜೆಪಿ, ಚೊಂಬೇಶ್ವರ ಮೋದಿ", "ಗೋ ಬ್ಯಾಕ್ ಗೋ ಬ್ಯಾಕ್ ಮೋದಿ ಗೋ ಬ್ಯಾಕ್" ಎಂದು ಧಿಕ್ಕಾರ ಕೂಗಿದರು.