ಬೆಂಗಳೂರು: ''ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 337 ತಜ್ಞ ವೈದ್ಯರು ಹಾಗೂ 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ'' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಸ್ನಾತಕೋತ್ತರ ವ್ಯಾಸಂಗ ಪೂರೈಸಿ 1 ವರ್ಷದ ಕಡ್ಡಾಯ ಸೇವೆಗಾಗಿ ಬರುವ ವೈದ್ಯ ಅಭ್ಯರ್ಥಿ/ತಜ್ಞವೈದ್ಯ ಅಭ್ಯರ್ಥಿಗಳನ್ನು ನೇಮಕ ಮಾಡುವ ಮೂಲಕ ವೈದ್ಯರ/ತಜ್ಞರುಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಖಾಲಿ ಇರುವ ನೇತ್ರ ತಜ್ಞರು ಮತ್ತು ರೇಡಿಯಾಲಜಿ ತಜ್ಞರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ'' ಎಂದು ಮಾಹಿತಿ ನೀಡಿದರು.
ನಿರ್ವಹಣಾ ಅನುದಾನ ಹೆಚ್ಚಳಕ್ಕೆ ಸಿಎಂಗೆ ಮನವಿ: ''ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೊಳಪಟ್ಟಿರುವ ಎಲ್ಲ ಆಸ್ಪತ್ರೆಗಳಿಗೆ ವರ್ಷಕ್ಕೆ 25 ಕೋಟಿ ರೂ. ನಿರ್ವಹಣಾ ಅನುದಾನ ನೀಡಲಾಗುತ್ತಿದ್ದು, ಇದು ಸಾಕಾಗುತ್ತಿಲ್ಲ. ಇದರ ಹೆಚ್ಚಳಕ್ಕೆ ಮಖ್ಯಮಂತ್ರಿಗಳಲ್ಲಿ ಕೋರಲಾಗಿದೆ. ಆಸ್ಪತ್ರೆಗಳಲ್ಲಿ ಎಲ್ಲ ಸೌಕರ್ಯಗಳು ಸಮರ್ಪಕವಾಗಿರಬೇಕು ಎನ್ನುವುದು ನಮ್ಮ ಉದ್ದೇಶ'' ಎಂದು ಹೇಳಿದರು.
''ಶ್ರವಣಬೆಳಗೋಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಗಳಿಗೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಲಾಗುವುದು'' ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿದರು.
ಆರೋಗ್ಯ ಕೇಂದ್ರ ಮೇಲ್ದರ್ಜೆ ಬಗ್ಗೆ ಪರಿಶೀಲನೆ: ''ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಮಾರ್ಗಸೂಚಿ ಅನ್ವಯ ನಗರ ಪ್ರದೇಶದಲ್ಲಿ 2.50 ಲಕ್ಷ ಜನಸಂಖ್ಯೆಗೆ ಒಂದು ನಗರ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಆದರೆ, ಸುರತ್ಕಲ್ ಪ್ರದೇಶದ ಜನಸಂಖ್ಯೆಯೇ 63,729 ಇರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಶಾಸಕರು ಕಳೆದ ವರ್ಷ ಮೇಲ್ದರ್ಜೇರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು'' ಎಂದು ಸಚಿವ ಗುಂಡೂರಾವ್ ತಿಳಿಸಿದರು.
ಶಾಸಕ ಡಾ.ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ''800 ಫಾರ್ಮಸಿಸ್ಟ್/ಟೆಕ್ನಿಷಿಯನ್ಗಳನ್ನು ನೇಮಕ ಪ್ರಕ್ರಿಯೆ ನಡೆದಿದ್ದು, ಶೀಘ್ರ ಅವರು ಬರಲಿದ್ದಾರೆ. ಅದರಡಿ ಸುರತ್ಕಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊರತೆ ಇರುವ ಸಿಬ್ಬಂದಿಯನ್ನು ಒದಗಿಸಲಾಗುವುದು. ಆಂಬ್ಯುಲೆನ್ಸ್ಗಳ ಮೂವಮೆಂಟ್ನ್ನು ಅತ್ಯಂತ ತುರ್ತು ಸಂದರ್ಭದಲ್ಲಿ ಜಿಲ್ಲೆಯಿಂದ ಇನ್ನೊಂದು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ನಿಟ್ಟಿನಲ್ಲಿ ನಿಯಮಗಳ ಸರಳೀಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಹುಣಸೂರು ತಾಲೂಕಿನಲ್ಲಿ ಆಸ್ಪತ್ರೆ: ''ಹುಣಸೂರು ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ 100 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯ ಕಟ್ಟಡವನ್ನು ಮುಂದಿನ ವರ್ಷದೊಳಗಾಗಿ ಜನಸೇವೆಗೆ ಲೋಕಾರ್ಪಣೆಗೊಳಿಸಲಾಗುವುದು'' ಎಂದು ಸಚಿವರು ಜೆಡಿಎಸ್ ಶಾಸಕ ಜಿ.ಟಿ.ಹರೀಶ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.
''ಹುಣಸೂರು ಪಟ್ಟಣದಲ್ಲಿ 31 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಆದರೆ ರಸ್ತೆ, ಕಾಂಪೌಂಡ್, ಲಿಫ್ಟ್ ಸೇರಿದಂತೆ ಇತರ ಕೆಲಸಗಳಿಗಾಗಿ 14 ಕೋಟಿ ರೂ. ಅಗತ್ಯವಿದೆ. ಅದನ್ನು ಮಂಜೂರು ಮಾಡದೇ ಇದ್ದರೆ ಹೊಸ ಕಟ್ಟಡ ನಿರ್ಮಾಣ ನಿರರ್ಥಕಗೊಂಡು ಶಿಥಿಲಗೊಳ್ಳುತ್ತದೆ. ಹಳೆಯ ಕಟ್ಟಡವೂ ಸೋರುತ್ತಿದ್ದು, ಜನರಿಗೆ ತೊಂದರೆಯಾಗುತ್ತಿದೆ'' ಎಂದು ಶಾಸಕರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ''ಹೊಸ ಕಟ್ಟಡದ ಮೂಲಸೌಲಭ್ಯಕ್ಕಾಗಿ 10 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಲಭ್ಯ ಇರುವ ಅನುದಾನ ಒದಗಿಸಿ ಕಟ್ಟಡ ನಿರ್ಮಾಣ ಮಾಡಲಾಗುವುದು'' ಎಂದು ಭರವಸೆ ನೀಡಿದರು.
ಇದನ್ನೂ ಓದಿ: ವಿಧಾನಪರಿಷತ್ನಲ್ಲಿ ಸಿಎಂ ವಿಷಾದಕ್ಕೆ ಪ್ರತಿಪಕ್ಷಗಳ ಪಟ್ಟು, ಒಪ್ಪದ ಸರ್ಕಾರ: ಬಿಜೆಪಿ-ಜೆಡಿಎಸ್ ಸಭಾತ್ಯಾಗ