ಹುಬ್ಬಳ್ಳಿ: ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ 22 ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ.
ಗಣೇಶ ಚತುರ್ಥಿಗೆ ರೈಲು: ರೈಲು ಸಂಖ್ಯೆ 06589 - ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ರಾತ್ರಿ 09:15 ಗಂಟೆಗೆ ನಿರ್ಗಮಿಸಿ, ಮರುದಿನ ಬೆಳಗ್ಗೆ 7.44 ಗಂಟೆಗೆ ಕಲಬುರಗಿಗೆ ತಲುಪಲಿದೆ. ಈ ಸೇವೆ ಸೆಪ್ಟೆಂಬರ್ 5ರಿಂದ 7ವರೆಗೆ ಇರಲಿದೆ. ರೈಲು 3 ಟ್ರಿಪ್ ಸಂಚಾರ ಮಾಡಲಿದೆ.
ರೈಲು ಸಂಖ್ಯೆ 06590 - ಕಲಬುರಗಿಯಿಂದ ಬೆಳಗ್ಗೆ 09:35 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಗೆ ಆಗಮಿಸಲಿದೆ.
ದೀಪಾವಳಿ ಹಬ್ಬ: ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ಇರಲಿದೆ. ಪ್ರಮುಖವಾಗಿ ಮೈಸೂರು - ವಿಜಯಪುರ, ವಿಜಯಪುರ - ಮೈಸೂರು, ಯಶವಂತಪುರ - ಬೆಳಗಾವಿ, ಬೆಳಗಾವಿ - ಯಶವಂತಪುರ ರೈಲುಗಳು ನಿರಂತರವಾಗಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 3ರವರೆಗೆ ಸಂಚರಿಸಲಿವೆ.
ದಸರಾ ಹಬ್ಬ: ದಸರಾ ನಿಮಿತ್ತ ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಮೈಸೂರು ಹಾಗೂ ಚಾಮರಾಜನಗರಗಳ ನಡುವೆ ಅಕ್ಟೋಬರ್ 9ರಿಂದ 13ರ ವರೆಗೆ ವಿಶೇಷ ರೈಲು ಸಂಚಾರ ಕಲ್ಪಿಸಲಾಗುತ್ತಿದೆ.
''ಈ ಬಗ್ಗೆ ಮುಂಗಡ ಬುಕಿಂಗ್, ನಿಲುಗಡೆ ಮತ್ತು ವೇಳಾಪಟ್ಟಿ ಸೇರಿದಂತೆ ಯಾವುದೇ ಹೆಚ್ಚಿನ ಮಾಹಿತಿಗಾಗಿ, ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ www.enquiry.indianrail.gov.in ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು'' ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.