ಹಾವೇರಿ: ಇಂದು ವಿಶ್ವ ಕಂಡ ಮಹಾನಚೇತನ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನ. ಅಹಿಂಸೆ, ಸತ್ಯಾಗ್ರಹ ಸೇರಿದಂತೆ ಹಲವು ತತ್ವಗಳನ್ನು ಜಗತ್ತಿಗೆ ನೀಡಿದ ಬಾಪೂಜಿ ಅವರು, ಸ್ವಾವಲಂಬಿ ಜೀವನ ಹಾಗೂ ಶಿಕ್ಷಣದ ಕನಸು ಕಂಡವರು. ಅಂತಹ ಮಹಾತ್ಮ ಗಾಂಧೀಜಿಯವರ ತತ್ವ, ಕನಸು ಸಾಕಾರಗೊಂಡಿರುವ ಶಾಲೆಯೊಂದು ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿದೆ.
ಗಾಂಧಿ ಗ್ರಾಮೀಣ ಗುರುಕುಲ ಹೆಸರಿನ ಈ ಶಾಲೆ ಸ್ಥಾಪಿತವಾಗಿದ್ದು, 1984 ಅಕ್ಟೋಬರ್ 2ರಂದು. ಮಹಾತ್ಮ ಗಾಂಧೀಜಿ ಒಡನಾಡಿ, ಗಾಂಧಿವಾದಿ ಗುದ್ಲೆಪ್ಪ ಹಳ್ಳಿಕೇರಿ ಸ್ಥಾಪಿಸಿರುವ ಈ ಶಾಲೆಯಲ್ಲಿ ಗ್ರಾಮೀಣ ಭಾಗದ 220ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿಯೊಬ್ಬರಲ್ಲೂ ಗಾಂಧೀಜಿ ತತ್ವಗಳು ಮೈದಳಿದಂತೆ ಶಿಕ್ಷಕರು ಇಲ್ಲಿ ಬೋಧನೆ ಮಾಡುತ್ತಿದ್ದಾರೆ. 5ನೇ ತರಗತಿಯಿಂದ ಆರಂಭವಾಗುವ ಇಲ್ಲಿಯ ಶಿಕ್ಷಣ 10ನೇ ತರಗತಿಯವರೆಗೆ ಮುಂದುವರೆಯುತ್ತದೆ. ಈ 6 ವರ್ಷಗಳಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಜಗತ್ತಿನ ಎಲ್ಲಿಯಾದರೂ ಸ್ವಾವಲಂಬಿ ಜೀವನ ನಡೆಸಲು ಶಕ್ತರಾಗುವಂತೆ ಇಲ್ಲಿ ತಯಾರು ಮಾಡಲಾಗುತ್ತದೆ.
ತಮ್ಮ ಬಟ್ಟೆ ತಾವೇ ನೇಯುವ ಮಕ್ಕಳು: ಖಾದಿ ಬಟ್ಟೆಯೇ ಇವರ ಸಮವಸ್ತ್ರ, ಇವರು ಧರಿಸುವ ಸಮವಸ್ತ್ರದ ಬಟ್ಟೆಯನ್ನು ಇವರೇ ನೇಯಿಗೆ ಮಾಡಿಕೊಳ್ಳಬೇಕು. ಅಲ್ಲದೇ ತಾವು ಊಟ ಮಾಡುವ ಆಹಾರವನ್ನು ಗುರುಕುಲದ ಜಮೀನಿನಲ್ಲಿ ತಾವೇ ಬೆಳೆಯಬೇಕು. ಶೌಚಾಲಯ ಶುಚಿಗೊಳಿಸಬೇಕು, ತಮ್ಮ ಬಟ್ಟೆಗಳನ್ನು ತಾವೇ ತೊಳೆಯಬೇಕು. ಜೊತೆಗೆ, ಗೋಶಾಲೆ, ರೇಷ್ಮೆಗಾರಿಕೆ, ಜೇನು ಸಾಕಾಣಿಕೆ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಕಲಿಸಲಾಗುತ್ತದೆ. ಮಕ್ಕಳು ಶುದ್ಧ ಸಸ್ಯಹಾರಿಗಳಾಗಿದ್ದು, ಮಾಂಸಾಹಾರ ಸೇವನೆ ನಿಶಿದ್ಧ.
ಶಾಲಾ ಇತಿಹಾಸ: 1984ರಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಅವರಿಗೆ ಷಷ್ಟ್ಯಬ್ದಿ ಕಾರ್ಯಕ್ರಮದಲ್ಲಿ 1 ಲಕ್ಷ 50 ಸಾವಿರ ರೂಪಾಯಿ ಹಣ ಕಾಣಿಕೆಯಾಗಿ ಬಂದಿತ್ತು. ಅದೇ ಹಣದಿಂದ ಅವರು ಗಾಂಧಿ ಗ್ರಾಮೀಣ ಗುರುಕುಲ ಸ್ಥಾಪಿಸಿದ್ದಾರೆ. ಬಡ ಮತ್ತು ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಮೌಖಿಕ ಸಂದರ್ಶನದ ಮೂಲಕ ಐದನೇ ತರಗತಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಒಂದು ತರಗತಿಯಲ್ಲಿ 40 ವಿದ್ಯಾರ್ಥಿಗಳಂತೆ 6 ತರಗತಿಗಳಿಗೆ 240 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಾರೆ.
ರಾಜ್ಯದಲ್ಲೇ ಏಕೈಕ ಗುರುಕುಲ: ರಾಜ್ಯದಲ್ಲಿರುವ ಏಕೈಕ ಗಾಂಧಿ ಗ್ರಾಮೀಣ ಗುರುಕುಲ ಇದಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗಕ್ಕೆ ಆಗಮಿಸುತ್ತಾರೆ. ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಮಹಾತ್ಮ ಗಾಂಧೀಜಿ ಹೇಳಿದಂತೆ ಸಾಮಾನ್ಯ ಶಿಕ್ಷಣದ ಜೊತೆಗೆ ಮೂಲ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣವನ್ನು ಕಲಿಸಲಾಗುತ್ತದೆ. ಗುರುಕುಲದಲ್ಲಿ ಕಲಿಯುವ ಪ್ರತಿಯೊಬ್ಬ ಮಕ್ಕಳ ಕಣ್ಣಲ್ಲೂ ಗಾಂಧಿ ತತ್ವಗಳು ಅಣುರಣಿಸುತ್ತಿವೆ. ಬೆಳಗಿನ ಜಾವ ಐದು ಗಂಟೆಗೆ ಎದ್ದು ಗಾಂಧೀಜಿ ತತ್ವಗಳನ್ನು ಪಠಣ ಮಾಡುತ್ತಾರೆ. ಪ್ರಾರ್ಥನೆ ಸಲ್ಲಿಸಿ ಅಭ್ಯಾಸ, ಕ್ರೀಡೆ ಮತ್ತಿತರ ಚಟುವಟಿಕೆಗಳ ಕಡೆಗೆ ಗಮನ ಕೊಡುತ್ತಾರೆ. ಗಾಂಧೀಜಿ ಆಶಯದಂತೆ ಇಲ್ಲಿನ ಮಕ್ಕಳು ನೂಲುವುದು, ನೇಯುವುದು, ಕೃಷಿ ಕೆಲಸ ಮಾಡುವುದು, ಸ್ವಾವಲಂಬಿಗಳಾಗಿ ತಮ್ಮ ತಮ್ಮ ಕೆಲಸವನ್ನು ತಾವೇ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ.
ದೇಶ, ವಿದೇಶಗಳಲ್ಲಿರುವ ಹಿರಿಯ ವಿದ್ಯಾರ್ಥಿಗಳು: ಎಲ್ಲ ಶಾಲೆಗಳಂತೆ ಇಲ್ಲಿಯೂ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಶಾಲೆಯಲ್ಲಿ 15ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ತಮಗೆ ಬದುಕು ಕಟ್ಟಿಕೊಟ್ಟ ಗುರುಕುಲಕ್ಕೆ ಲಕ್ಷಾಂತರ ರೂಪಾಯಿ ಸಹಾಯ ಸಲ್ಲಿಸಿ, ಮೂಲಭೂತ ಸೌಲಭ್ಯ ಒದಗಿಸಿದ್ದಾರೆ. ಇಲ್ಲಿಯ ಮಕ್ಕಳು ಕೇವಲ ವಿದ್ಯಾಭ್ಯಾಸ, ಕ್ರೀಡೆಯಲ್ಲದೆ ಸಾಂಸ್ಕೃತಿಕ ಕಾರ್ಯಗಳಲ್ಲಿಯೂ ಮುಂದಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೆ ಸ್ಪರ್ಧಿಸಿದ ಹೆಗ್ಗಳಿಕೆ ಗಾಂಧಿ ಗ್ರಾಮೀಣ ಗುರುಕುಲಕ್ಕಿದೆ. ವಸತಿ ನಿಲಯದ ಶಾಲೆಯಲ್ಲಿನ ಮಕ್ಕಳು ಸದಾ ಸತ್ಯವನ್ನೇ ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಒಟ್ಟಾರೆ, ಮಹಾತ್ಮ ಗಾಂಧೀಜಿ ಕನಸಿನಂತೆ, ಗುದ್ಲೆಪ್ಪ ಹಳ್ಳಿಕೇರಿ ಆಶಯದಂತೆ ಕಾರ್ಯನಿರ್ಹಿಸುತ್ತಿರುವ ಈ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ. ಪ್ರಸ್ತುತ ವರ್ಷದ ಗಾಂಧಿ ಸೇವಾ ಪ್ರಶಸ್ತಿಗೆ ಶಾಲೆ ಆಯ್ಕೆಯಾಗಿರುವುದು ಶಾಲೆಗೆ ಮತ್ತೊಂದು ಗರಿಮೆ ತಂದುಕೊಟ್ಟಿದೆ.
ಇದನ್ನೂ ಓದಿ: ಈ ದಿನ ನೀವು ನೋಡಲೇಬೇಕಾದ ಗಾಂಧೀಜಿ ಜೀವನಾಧಾರಿತ ಸಿನಿಮಾಗಳಿವು..