ಬೆಂಗಳೂರು: ಗ್ರೇಸ್ ಮಾರ್ಕ್ಸ್ ಮೂಲಕ ಫಲಿತಾಂಶ ಕುಸಿತ ತಡೆಯುವ ನಿರ್ಧಾರ ಮಾಡಿ ಟೀಕೆಗೆ ಗುರಿಯಾಗಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇದೀಗ ಎಸ್ಎಸ್ಎಲ್ಸಿ ಪರೀಕ್ಷೆ-2ರಲ್ಲಿ ಫಲಿತಾಂಶ ಪ್ರಮಾಣ ಹೆಚ್ಚಳಕ್ಕೆ ಬ್ರಿಡ್ಜ್ ಕೋರ್ಸ್ ಆರಂಭಿಸಿದೆ. ಪರೀಕ್ಷೆಗೆ ಒಂದು ತಿಂಗಳಿಕ್ಕಿಂತ ಕಡಿಮೆ ಸಮಯ ಇರುವ ಹಿನ್ನೆಲೆ ವಿಶೇಷ ತರಗತಿ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಗೊಳಿಸಲಾಗುತ್ತಿದೆ.
ವಿಶೇಷ ತರಗತಿ:ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ಹೆಸರು ನೋಂದಣಿ ಮಾಡಿರುವ ವಿದ್ಯಾರ್ಥಿಗಳಿಗೆ ಇಂದಿನಿಂದ ಜೂನ್ 5ರ ತನಕ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶನ ನೀಡಿದ್ದು, ಪರೀಕ್ಷಾ ಫಲಿತಾಂಶದ ಪ್ರಮಾಣ ಹೆಚ್ಚಳಕ್ಕೆ ಕಸರತ್ತು ನಡೆಸಿದೆ. 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಗೈರು ಹಾಜರಾದ, ನಾಟ್ ಕಂಪ್ಲೀಟ್ ಆದ,ಅಂಕಗಳ ಹೆಚ್ಚಳ ಮಾಡಿಕೊಳ್ಳಲು ಇಚ್ಛಿಸಿದ, ಹಾಗೂ ಹಿಂದಿನ ಸಾಲಿನಲ್ಲಿ ಅನುತ್ತೀರ್ಣ ಅಭ್ಯರ್ಥಿಗಳಿಗೆ ಜೂನ್ 7 ರಿಂದ 14ರ ವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಆರಂಭಗೊಳ್ಳುವ ಎರಡು ದಿನದ ಮೊದಲಿನವರೆಗೂ ಎಲ್ಲ ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಪಠ್ಯವನ್ನು ಬೋಧಿಸಲಾಗುತ್ತದೆ.
ಮೇ 29ರ ತನಕ ಶಾಲೆಗಳಿಗೆ ರಜೆ ಇದ್ದರೂ ಶಾಲೆಗಳಿಗೆ ಇಂದಿನಿಂದ ಆಗಮಿಸುವಂತೆ ಶಿಕ್ಷಕರು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಹಾಗಾಗಿ ಐದಿನೈದು ದಿನ ಮೊದಲೇ ಶಿಕ್ಷಕರು ಶಾಲೆಗಳಿಗೆ ಆಗಮಿಸಬೇಕಾಗಿದೆ. ಶಾಲೆಗಳಿಗೆ ಮೇ 15ರಿಂದಲೇ ಆಗಮಿಸಬೇಕಿದೆ. ಪರೀಕ್ಷಾ ಕೆಲಸ, ಚುನಾವಣಾ ಕೆಲಸದ ಒತ್ತಡದಿಂದಾಗಿ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗಿಲ್ಲ ಅಷ್ಟರಲ್ಲೇ ಶಾಲೆಗಳಿಗೆ 15 ದಿನ ಮೊದಲೇ ಮರಳಲು ಸೂಚನೆ ನೀಡಲಾಗಿದೆ ಎಂದು ಶಿಕ್ಷಕರು ಬೇಸರ ಹೊರಹಾಕಿದ್ದಾರೆ. ಆದರೆ, ಶಿಕ್ಷಣ ಇಲಾಖೆ ನಿರ್ದೇಶನ ಪಾಲಿಸಲೇಬೇಕಾದ ಹಿನ್ನೆಲೆಯಲ್ಲಿ ಶಾಲೆಗಳತ್ತ ಶಿಕ್ಷಕರು ಹೆಜ್ಜೆ ಇಟ್ಟಿದ್ದಾರೆ.
ಬ್ರಿಡ್ಜ್ ಕೋರ್ಸ್: ಬ್ರಿಡ್ಜ್ ಕೋರ್ಸ್ ನಡೆಸುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಶತಾಯ ಗತಾಯ ಎಸ್ಎಸ್ಎಲ್ಸಿ ಪರೀಕ್ಷೆ-2ರಲ್ಲಿ ಉತ್ತಮ ಫಲಿತಾಂಶದೊಂದಿಗೆ ಟೀಕೆಯಿಂದ ಹೊರಬರಬೇಕು ಎನ್ನುವ ನಿರ್ಧಾರ ಮಾಡಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸುವುದನ್ನು ಪರಿಶೀಲಿಸಲು ಪ್ರತಿ ಜಿಲ್ಲಾ ಹಂತದಲ್ಲಿ ತಂಡವನ್ನು ರಚನೆ ಮಾಡಲಾಗುತ್ತದೆ.
ಈ ತಂಡ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿ ವರದಿ ನೀಡಲಿದೆ. ಅದರ ಅನ್ವಯ ಲೋಪದೋಶ ಅಥವಾ ಆದೇಶ ಪಾಲಿಸುವಲ್ಲಿ ಕರ್ತವ್ಯಲೋಪವೆಸಗಿದ ಶಾಲೆಗಳು ಮತ್ತು ಶಿಕ್ಷಕರ ವಿರುದ್ಧ ಕ್ರಮಕ್ಕೂ ಮುಂದಾಗಿದೆ.
ವೆಬ್ ಕ್ಯಾಸ್ಟಿಂಗ್: ಕಳೆದ ಬಾರಿ 84 ಪರ್ಸೆಂಟ್ ಫಲಿತಾಂಶ ಬಂದಿತ್ತು. ಈ ವರ್ಷದ ಗುರಿಯೂ ನಮ್ಮದು ಅದೇ ಆಗಿದೆ, ಪರೀಕ್ಷೆ 1 ರಲ್ಲಿ ಶೇ.74 ರಷ್ಟು ಫಲಿತಾಂಶ ಬಂದಿದ್ದರು ಎರಡು ಹಾಗೂ ಮೂರನೇ ಪರೀಕ್ಷೆ ಮೂರು ಪರೀಕ್ಷೆಗಳು ಸೇರಿ ಕಳೆದ ಬಾರಿಯ ಮಟ್ಟ ತಲುಪಬೇಕು ಎನ್ನುವುದೇ ನಮ್ಮ ಗುರಿಯಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪರೀಕ್ಷೆ-1ಕ್ಕೆ ಪ್ರಾಯೋಗಿಕವಾಗಿ ಆಯ್ದ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಿದ್ದು, ಪರೀಕ್ಷೆ 2,3ಕ್ಕೆ ಶೇ.100 ರಷ್ಟು ವೆಬ್ ಕಾಸ್ಟಿಂಗ್ ಮಾಡಲಿದ್ದೇವೆ, ವೆಬ್ ಕ್ಯಾಸ್ಟಿಂಗ್ನಿಂದ ಫಲಿತಾಂಶ ಕಡಿಮೆಯಾಗಿರಬಹುದು. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದಲೇ ವೆಬ್ ಕ್ಯಾಸ್ಟಿಂಗ್ ಮಾಡುತ್ತಿದ್ದೇವೆ.ಇದರಿಂದ ವಿದ್ಯಾರ್ಥಿಗಳು ಒತ್ತಡ ಹಾಗೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕ್ಯಾಮೆರಾ ಕಣ್ಗಾವಲಿದೆ ಎನ್ನುವುದರ ಕಡೆ ಗಮನ ನೀಡದೇ ಸಹಜವಾಗಿ ಪರೀಕ್ಷೆ ಬರೆಯಿರಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂಓದಿ:ಎಸ್‌ಎಸ್‌ಎಲ್‌ಸಿ ಟಾಪರ್ ಅಂಕಿತಾಗೆ ₹5 ಲಕ್ಷ, ನವನೀತ್ಗೆ ₹3 ಲಕ್ಷ ನೆರವು ಘೋಷಿಸಿದ ಸಿಎಂ - SSLC Toppers