ಹುಬ್ಬಳ್ಳಿ: ಸವದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಕಲ್ಪಿಸಲಾಗಿದ್ದ ಹುಬ್ಬಳ್ಳಿ-ಯಲ್ಲಮ್ಮನಗುಡ್ಡ ವಿಶೇಷ ಬಸ್ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಭಕ್ತರ ಬೇಡಿಕೆಯ ಮೇರೆಗೆ ಛಟ್ಟಿ ಅಮವಾಸ್ಯೆಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಶೀಗಿ ಹುಣ್ಣಿಮೆ ಹಾಗೂ ದೀಪಾವಳಿ ಅಮವಾಸ್ಯೆಯ ಪ್ರಯುಕ್ತ ಸವದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದ ವಿಶೇಷ ನೇರ ಬಸ್ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.
ಭಕ್ತರ ಕೋರಿಕೆಯ ಮೇರೆಗೆ ದೇವಿಯ ವಾರದ ನಿಮಿತ್ಯ ನವೆಂಬರ್ 19ರಂದು ಮಂಗಳವಾರ 18 ವಿಶೇಷ ಹೆಚ್ಚುವರಿ ಬಸ್ಗಳನ್ನು ಓಡಿಸಲಾಯಿತು. ಈ ವಿಶೇಷ ನೇರ ಬಸ್ಗಳಿಂದ ಸಾವಿರಾರು ಭಕ್ತರಿಗೆ ಅನುಕೂಲವಾಗಿದೆ. ಬರುವ ಶುಕ್ರವಾರ ಹಾಗೂ ಮಂಗಳವಾರದಂದು ಸಹ ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರಿಂದ ಕೋರಿಕೆ ಬಂದಿದೆ. ಭಕ್ತರು ಹಾಗೂ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಛಟ್ಟಿ ಅಮವಾಸ್ಯೆಯವರೆಗೆ ನವೆಂಬರ್ 22, 26 ಹಾಗೂ 29ರಂದು ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣದಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ನೇರ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಂಧ್ರದಲ್ಲಿ ಓಡಾಡುವ ದೇಶದ ಎಲ್ಲ ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ದರದಲ್ಲಿ ಶೇ 25 ರಷ್ಟು ರಿಯಾಯಿತಿ