ಪುತ್ತೂರು: "ರಸ್ತೆಯಲ್ಲಿ ಪ್ರತಿಭಟನೆ ಮಾಡಿ ಯಾರಿಗೋ ಬೈಯುವುದಕ್ಕೆ ದೇಶಪ್ರೇಮ ಎನ್ನುವುದಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮಕ್ಕಳಿಗೆ ಮಾನವೀಯತೆ, ಸಹೋದರತ್ವ ತುಂಬಿದ ಮೌಲ್ಯಾಧಾರಿತ ಶಿಕ್ಷಣ ನೀಡುವುದೇ ನಿಜವಾದ ದೇಶಪ್ರೇಮ" ಎಂದು ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಪುತ್ತೂರು ನೆಹರುನಗರದ ಸುಧಾನ ವಿದ್ಯಾಸಂಸ್ಥೆಯಲ್ಲಿ ಶನಿವಾರ ನೂತನ ಪದವಿಪೂರ್ವ ಕಾಲೇಜನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಈ ಸಮಾಜದಲ್ಲಿ ಮಂತ್ರಿಗಳು ಬಲಿಷ್ಟರಾದರೆ, ವಿದ್ಯಾರ್ಥಿಗಳಿಂದ ದೇಶ ಬಲಿಷ್ಠವಾಗುತ್ತದೆ. ಬಡತನದಿಂದ ದೂರವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ. ನೀವು ಉತ್ತಮ ಶಿಕ್ಷಣ ಪಡೆದರೆ ನೀವು ಮಾತ್ರವಲ್ಲ ನಿಮ್ಮ ಕುಟುಂಬವೂ ಉನ್ನತ ಸ್ಥಾನ ಪಡೆದುಕೊಳ್ಳುತ್ತದೆ. ಮಕ್ಕಳ ಶೈಕ್ಷಣಿಕ ಸಂತಸದಲ್ಲಿ ತಂದೆ - ತಾಯಿ ಕೂಡಾ ಉತ್ಸಾಹದಿಂದ ಭಾಗವಹಿಸಬೇಕು. ನಮಗೆ ಬೀಚ್, ಉದ್ಯಾನ, ಜಾತ್ರೆಗಳಿಗೆ ಮಕ್ಕಳೊಂದಿಗೆ ಹೋಗಲು ಪುರುಸೊತ್ತು ಇದೆ ಎಂದಾರೆ ಮಕ್ಕಳ ಶಾಲೆಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಲು ಯಾಕೆ ಸಮಯ ಸಿಗುವುದಿಲ್ಲ? ಎಂದು ಪೋಷಕರನ್ನು ಪ್ರಶ್ನಿಸಿದರು.
"ಶಿಕ್ಷಣದ ಜತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಮಾತ್ರವಲ್ಲ, ನಿಮ್ಮ ವ್ಯಕ್ತಿತ್ವವೂ ನಿಮ್ಮ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಭಾರತದಂತಹ ಸಂವಿಧಾನ ಬೇರೆ ಯಾವ ದೇಶಕ್ಕೆ ಹೋದರೂ ಸಿಗುವುದು ಸಾಧ್ಯವಿಲ್ಲ" ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
"ಸುಧಾನದಂತಹ ಶಿಕ್ಷಣ ಸಂಸ್ಥೆಗಳಿಂದ ಹೊರಬರುವಾಗ 'ದೇಶದ ಸಂಪತ್ತು'ಗಳಾಗಿ ಹೊರಬನ್ನಿ. ನಿಮ್ಮ ಜತೆಗೆ ಮಾನವೀಯತೆ ಇರಲಿ, ತಾಳ್ಮೆ ಇರಲಿ. ನೀವಾಡುವ ಮಾತು, ಮಾಡುವ ಕೆಲಸ ದೇಶದ ಹಿತ ಕಾಯುವಿಕೆಗೆ ಪೂರಕವಾಗಬೇಕು. ಯಾವುದೇ ಸಂದರ್ಭದಲ್ಲೂ ಮಾರಕವಾಗಬಾರದು." ಎಂದರು.
ಉತ್ತಮ ರಾಜಕಾರಣಿಗಳಾಗಿ: "ಹೆಣ್ಣುಮಕ್ಕಳಿಗೆ ನಾಯಕತ್ವ ಗುಣ ಹುಟ್ಟು ಕೊಡುಗೆ. ಹುಟ್ಟಿದ ಮನೆಯಲ್ಲಿ ಈ ನಾಯಕತ್ವ ಗುಣ ಬೆಳೆಯುತ್ತದೆ. ಪತಿಯ ಮನೆಯಲ್ಲಿ ಈ ಗುಣ ಮತ್ತಷ್ಟು ಮೌಲ್ಯ ಪಡೆದುಕೊಳ್ಳುತ್ತದೆ. ನೀವಿಡುವ ಒಂದು ಚಿಕ್ಕ ಹೆಜ್ಜೆ ಶೈಕ್ಷಣಿಕ ಕ್ರಾಂತಿಯ ದೊಡ್ಡ ಹೆಜ್ಜೆಯಾಗಬೇಕು. ಶೈಕ್ಷಣಿಕ ನೆಲೆಯಿಂದ ಹೊರಬಂದಾಗ ಉತ್ತಮ ವೈದ್ಯ, ವಕೀಲ, ಎಂಜಿನಿಯರ್ಗಳಾಗಿ, ಜತೆಗೆ ಉತ್ತಮ ರಾಜಕಾರಣಿಗಳಾಗಿ. ಯಾಕೆಂದರೆ ಸಮಾಜವನ್ನು ಸುಧಾರಿಸುವ ಕಾರ್ಯ ರಾಜಕಾರಣಿಗಳಿಂದ ಮಾತ್ರ ಸಾಧ್ಯ. ಯುವಜನತೆ ಶಿಕ್ಷಣದ ಜತೆಗೆ ಸಾಹಿತ್ಯದತ್ತ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಯುವ ಜನತೆಯ ಕೊರತೆ ಎದ್ದುಕಾಣುತ್ತಿದೆ" ಎಂದು ಹೇಳಿದರು.
ಸುಧಾನ ಶಿಕ್ಷಣ ಸಂಸ್ಥೆಗಳ ರೆ. ವಿಜಯ ಹಾರ್ವಿನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಂಗಳೂರು ವಿವಿ ಉಪನಿರ್ದೇಶಕ ಜಯಣ್ಣ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಸುಧಾನ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿಯ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಸುಧಾನ ಪದವಿಪೂರ್ವ ಕಾಲೇಜಿನ ಸುಪ್ರೀತ್ ಕೆ.ಸಿ ಭಾಗವಹಿಸಿದ್ದರು.