ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ಈ ಹಿನ್ನೆಲೆ ಮತ್ತೆ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಿಗೆ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು, ಉತ್ತರ ಒಳನಾಡಿನ ಬೆಳಗಾವಿ, ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಸಹ ಅತ್ಯಂತ ಭಾರೀ ಮಳೆಯಾಗಲಿದೆ. ಮತ್ತು ಅಲ್ಲಿನ ಜಿಲ್ಲೆಗಳಲ್ಲಿ ನಿರಂತರ ಗಾಳಿಯ ವೇಗ 40 ರಿಂದ 50 ಕಿ.ಮೀ ತಲುಪುವ ಸಾಧ್ಯತೆಯಿದೆ. ಒಳನಾಡಿನ ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿ ಸಹ ಭಾರೀ ಗಾಳಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಮತ್ತು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಗಾಳಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸಿಲಿಕಾನ್ ಸಿಟಿಯಲ್ಲಿ ಹಗುರದಿಂದ ಸಾಧಾರಣ ಮಳೆ: ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಡಿಗ್ರಿ ಮತ್ತು 21 ಡಿಗ್ರಿ ದಾಖಲಾಗಲಿದೆ ಎಂದಿದೆ.
ಮೀನುಗಾರರಿಗೆ ಎಚ್ಚರಿಕೆ: ತೀವ್ರ ಬಿರುಗಾಳಿ 45 ರಿಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.
"ನೈಋತ್ಯ ಮಾನ್ಸೂನ್ ದಕ್ಷಿಣ ಅಂತರಿಕ ಕರ್ನಾಟಕದ ಮೇಲೆ ಸಕ್ರಿಯವಾಗಿದೆ. ಕರಾವಳಿಯಲ್ಲಿ ಸಾಧಾರಣವಾಗಿದೆ. ಕರಾವಳಿ ಮತ್ತು ಪಕ್ಕದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಬಲವಾದ ಗಾಳಿ ಒಮ್ಮುಖವಾಗಿದೆ. ಕರಾವಳಿಯ ಬಹುತೇಕ ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಮತ್ತು ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಮಳೆಯಾಗಿದೆ. ಮಂಗಳವಾರದಿಂದ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಅತೀ ಹೆಚ್ಚು ಮಳೆ 21 ಸೆಂ.ಮೀ ದಾಖಲಾಗಿದೆ" ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಮುಂದುವರೆದ ಮಳೆ ; ಮೂರು ಮನೆಗಳ ಗೋಡೆ ಕುಸಿತ - RAIN IN KARNATAKA