ದಾವಣಗೆರೆ: ಜೀವಕ್ಕೆ ಅಚಾನಕ್ಕಾಗಿ ಅಪಾಯ ಬಂದೊದಗಿದರೆ ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಆಗಲಿ ಎಂಬ ದೃಷ್ಟಿಯಿಂದ ಜನರು ಜೀವವಿಮೆ (ಇನ್ಶುರೆನ್ಸ್) ಮಾಡಿಸುತ್ತಾರೆ. ಅದರೆ, ಇಲ್ಲೊಬ್ಬ ದುರುಳ ತನ್ನ ಮಾವನ ಹೆಸರಿನಲ್ಲಿ ಜೀವವಿಮೆ ಹಣ ಪಡೆದುಕೊಳ್ಳಲು ಬದುಕಿದ್ದಾತನನ್ನು ಕೊಂದು ಹಾಕಿದ್ದಾನೆ. ಪ್ರಕರಣವನ್ನು ಪೊಲೀಸರು 24 ಗಂಟೆಯಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ದಾವಣಗೆರೆಯಲ್ಲಿ ನಗರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಮಾಮ್ ನಗರದ 32 ವರ್ಷದ ದುಗ್ಗೇಶ್ ಕೊಲೆಯಾದ ವ್ಯಕ್ತಿ. ಹಣ್ಣಿನ ವ್ಯಾಪಾರ, ಆಟೋ ಚಾಲಕನಾಗಿದ್ದ ಅಳಿಯ ಗಣೇಶ (24) ಹತ್ಯೆ ಮಾಡಿದ ಆರೋಪಿ. ಈತನಿಗೆ ನೆರವು ನೀಡಿದ ಸ್ನೇಹಿತರಾದ ಅನಿಲ್ (18), ಶಿವಕುಮಾರ್ (25) ಮಾರುತಿ (24) ಯನ್ನು ಕೊಲೆ ಆರೋಪದಡಿ ಆಜಾದ್ ನಗರ ಪೋಲಿಸರು ಹೆಡೆಮುರಿ ಕಟ್ಟಿದ್ದಾರೆ.
ಘಟನೆಯ ಹಿನ್ನೆಲೆ: ಕೊಲೆಯಾದ ದುಗ್ಗೇಶನ ತಮ್ಮ ಗೋಪಿ, ಆರೋಪಿ ಗಣೇಶನ ಬಳಿ ಬಡ್ಡಿಯಂತೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಇದನ್ನು ತೀರಿಸಲಾದೆ ಆತ ಊರು ಬಿಟ್ಟಿದ್ದ. ದುಗ್ಗೇಶ್ ಜೊತೆ ಗೋಪಿ ಉತ್ತಮ ಒಡನಾಟ ಹೊಂದಿದ್ದು, ಆರೋಪಿಗೆ ಗೊತ್ತಿತ್ತು. ಹೀಗಾಗಿ, ಆತ ಸಾಲ ತೀರಿಸಲು ಸೂಚಿಸಿದ್ದ. ಹಣ ವಾಪಸ್ಗಾಗಿ ಆರೋಪಿ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ದುಗ್ಗೇಶ್ನ ಹೆಸರಿನಲ್ಲಿ ಜೀವವಿಮೆ ಮಾಡಿದ್ದಾರೆ. ಬಳಿಕ ಕೊಲೆ ಮಾಡಿ ಹಣ ಡ್ರಾ ಮಾಡಿಕೊಳ್ಳಲು ಸ್ಕೆಚ್ ಹಾಕಿದ್ದಾರೆ.
ದುಗ್ಗೇಶ್ ಕುಡಿತದ ದಾಸನಾಗಿದ್ದರಿಂದ ಇನ್ನೊಂದು ವರ್ಷದಲ್ಲಿ ಸಾಯುತ್ತಾನೆ. ಈತನ ಹೆಸರಿನಲ್ಲಿ ಜೀವವಿಮೆ ಮಾಡಿಸಿ, ಹಣ ಪಡೆಯಲು ಅಳಿಯ ಗಣೇಶ್ ಸ್ನೇಹಿತರೊಂದಿಗೆ ಸೇರಿ ಯೋಜನೆ ರೂಪಿಸಿದ್ದಾನೆ. ಅದರಂತೆಯೇ ಆರೋಪಿಗಳು ದುಗ್ಗೇಶ್ನನ್ನು ಕೊಲೆ ಮಾಡಿದ್ದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮೃತ ದುಗ್ಗೇಶ್ ತಾಯಿ ಹುಲಿಗೆಮ್ಮ ಹೇಳುವಂತೆ, ಗಣೇಶ್ ಒಂದು ಇನ್ಶುರೆನ್ಸ್ ಬಾಂಡ್ ಮಾಡಿಸಿದ್ದ. ಬ್ಯಾಂಕ್ ಅಕೌಂಟ್ ಕೂಡ ಮಾಡಿಸಿ ದುಗ್ಗೇಶ್ನಿಂದ ಸಹಿ ಮಾಡಿಸಿಕೊಂಡಿದ್ದ. ಅಲ್ಲದೇ ಖಾಲಿ ಚೆಕ್ ಪಡೆದಿದ್ದ. ಸಾಲ ಕೊಡೆಸುತ್ತೇನೆ ಎಂದು ನಂಬಿಸಿದ್ದ. ನನ್ನನ್ನು ನಾಮಿನಿ ಮಾಡಿದ್ದ. ದುಗ್ಗೇಶ್ ಮೃತಪಟ್ಟ ಬಳಿಕ ಆತನ ಮರಣ ಪ್ರಮಾಣ ಪತ್ರ ನೀಡಿ, ಇನ್ಶುರೆನ್ಸ್ ಹಣ ಕ್ಲೇಮ್ ಮಾಡಬೇಕು. ಅದು ನನ್ನ ಅಕೌಂಟ್ಗೆ ಜಮಾ ಆಗುತ್ತದೆ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಏನಿದೆ?: ದುಗ್ಗೇಶ್ ಕೊಲೆ ಮಾಡಿ ಶವವನ್ನು ಮೃತ ವ್ಯಕ್ತಿಯ ಮನೆಯಲ್ಲಿ ತಂದು ಹಾಕಿ ಹೋಗಲಾಗಿದೆ. ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆರೋಪಿಗಳಾದ ಗಣೇಶ (24), ಅನಿಲ್ (18), ಶಿವಕುಮಾರ್ (25) ಮಾರುತಿ (24)ಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಆಕ್ಸಿಸ್ ಬ್ಯಾಂಕ್ನಲ್ಲಿ ಇನ್ಶುರೆನ್ಸ್ ಬಾಂಡ್ ಮಾಡಿಸಿದ್ದು , 40 ಲಕ್ಷ ರೂಪಾಯಿ ಹಣಕ್ಕಾಗಿ ಹತ್ಯೆ ಮಾಡಿದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಪ್ರಕರಣದ ಬಗ್ಗೆ ಹೇಳಿದ್ದಿಷ್ಟು: ಅಜಾದ್ ನಗರ ಠಾಣೆಯ ಪಿಐ ಅಶ್ವಿನ್ ಕುಮಾರ್ ಅವರು ಪ್ರತಿಕ್ರಿಯಿಸಿ, ಆರೋಪಿ ಗಣೇಶ್ ಇನ್ಶುರೆನ್ಸ್ ಬಾಂಡ್ ಮಾಡಿಸಿ 40 ಲಕ್ಷ ರೂಪಾಯಿ ಹಣದ ಆಸೆಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈಗಾಗಲೇ ಎಫ್ಐಆರ್ ದಾಖಲು ಮಾಡಿ ನಾಲ್ವರನ್ನು ಬಂಧಿಸಲಾಗಿದೆ ಎಂದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ವೈದ್ಯಕೀಯ ವರದಿ ಹೈಕೋರ್ಟ್‌ಗೆ ಸಲ್ಲಿಕೆ