ಬೆಳಗಾವಿ: ವಯಸ್ಸಾದ ತಂದೆ-ತಾಯಿ, ಮೂವರು ಸಹೋದರಿಯರ ಪಾಲಿಗೆ ಆಧಾರಸ್ತಂಭವಾಗಿದ್ದ ಯಲಗೊಂಡ ಸಣ್ಣಯಲ್ಲಪ್ಪ ಗುಂಡ್ಯಾಗೋಳ (20) ಬೆಳಗಾವಿ ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾಗಿ ದುರಂತ ಅಂತ್ಯ ಕಂಡಿದ್ದಾನೆ. ಒಂದೆಡೆ ಮಗನನ್ನು ಕಳೆದುಕೊಂಡು ತಾಯಿ ಮತ್ತು ಕುಟುಂಬಸ್ಥರ ಆಕ್ರಂದನವಾದರೆ, ಮತ್ತೊಂದೆಡೆ ಪೋಷಕರು ಸಂತೆ ಚೀಲದಲ್ಲಿ ಮಗನ ಮೃತದೇಹದ ಅವಶೇಷಗಳನ್ನು ತುಂಬಿಕೊಂಡು ಕಣ್ಣೀರಿಡುತ್ತಾ ಅಂತ್ಯಕ್ರಿಯೆಗೆ ತೆರಳಿದ ದೃಶ್ಯ ಮನಕಲಕುವಂತಿತ್ತು.
ಏನಿದು ಘಟನೆ?: ನಾವಗೆ ಗ್ರಾಮದ ಬಳಿ ಇರುವ ಸ್ನೇಹಂ ಟಿಕ್ಸೋ ಟೇಪ್ ಕಂಪನಿ ಕಾರ್ಖಾನೆಯಲ್ಲಿ ಕಳೆದ ತಡರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಮಾರ್ಕಂಡೇಯ ನಗರದ ನಿವಾಸಿ ಯಲಗೊಂಡ ಗುಂಡ್ಯಾಗೋಳ ಸಾವನ್ನಪ್ಪಿದ್ದಾನೆ. ನಾಲ್ಕು ತಿಂಗಳ ಹಿಂದಷ್ಟೇ ತುತ್ತಿನ ಚೀಲ ತುಂಬಿಸಿಕೊಳ್ಳಲು ಯಲಗೊಂಡ ಈ ಫ್ಯಾಕ್ಟರಿಯಲ್ಲಿ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದನು. ಕೆಲಸಕ್ಕೆ ಹೋಗಿದ್ದ ಮಗ ಮರಳಿ ಮನೆಗೆ ಬರುತ್ತಾನೆ ಎಂದು ಕಾಯುತ್ತಾ ಕುಳಿತಿದ್ದ ತಂದೆ-ತಾಯಿ, ಸಹೋದರಿಯರಿಗೆ ಕೊನೆಯದಾಗಿ ಮುಖವನ್ನೂ ನೋಡಲಾಗದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.
ರಾತ್ರಿಯಿಂದ ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದರೂ ಯಲಗೊಂಡನ ಸುಳಿವು ಪತ್ತೆಯಾಗಿರಲಿಲ್ಲ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಫ್ಯಾಕ್ಟರಿಯ ಲಿಫ್ಟ್‌ನಲ್ಲಿ ಯಲಗೊಂಡ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದ್ದ. ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಹೋಗಿದ್ದ ಯಲಗೊಂಡನ ಅಸ್ತಿಪಂಜರ ಮಾತ್ರ ಸಿಕ್ಕಿದೆ. ಮಗನ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಗನ ಅಸ್ಥಿಗಳನ್ನು ಚೀಲದಲ್ಲಿ ತುಂಬಿ ಕೊಂಡೊಯ್ದ ಪೋಷಕರು: ಮರಣೋತ್ತರ ಪರೀಕ್ಷೆಯ ಬಳಿಕ ಯಲಗೊಂಡನ ಮೃತದೇಹದ ಭಾಗಗಳನ್ನು ಬಟ್ಟೆಯಲ್ಲಿ ಮುಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ಸಂತೆಗೆ ಒಯ್ಯುವ ಕೈ ಚೀಲದಲ್ಲೇ ಮಗನ ಮೃತದೇಹದ ಭಾಗಗಳನ್ನು ತೆಗೆದುಕೊಂಡು ಪೋಷಕರು ಕಣ್ಣೀರು ಹಾಕುತ್ತಾ ಅಂತ್ಯಕ್ರಿಯೆಗೆ ಹೊರಟರು. ಈ ದೃಶ್ಯ ಕರುಳುಹಿಂಡುವಂತಿತ್ತು. ಪಿಯುಸಿ ಓದಿದ್ದ ಯಲಗೊಂಡ, ಫ್ಯಾಕ್ಟರಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲಸಕ್ಕೆ ಹೋಗಿ ಕೇವಲ ನಾಲ್ಕು ತಿಂಗಳಲ್ಲೇ ಅಗ್ನಿ ದುರಂತದಲ್ಲಿ ಅಂತ್ಯ ಕಂಡಿದ್ದಾರೆ. ಕಣ್ಮುಂದೆ ಮಗನ ಸಾವು ಕಂಡು ತಂದೆ-ತಾಯಿ ಮತ್ತು ಸಂಬಂಧಿಕರು ಕಂಗಾಲಾಗಿದ್ದಾರೆ.
ಸಂಬಂಧಿಕ ಬಸವರಾಜ ಪೆಂಡಾರಿ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಇಡೀ ಮನೆಯ ಜವಾಬ್ದಾರಿ ಯಲಗೊಂಡ ಹೊತ್ತುಕೊಂಡಿದ್ದ. ತಂದೆ-ತಾಯಿ ವಯಸ್ಸಾದವರು. ಒಬ್ಬ ಸಹೋದರಿಗೆ ಮದುವೆ ಆಗಿದ್ದು, ಇನ್ನಿಬ್ಬರು ಸಹೋದರಿಯರ ಮದುವೆ ಆಗಿಲ್ಲ. ದುಡಿದು ನಾಲ್ಕು ತುತ್ತು ಉಣ್ಣುವ ಹೊತ್ತಲ್ಲಿ ಸಜೀವ ದಹನವಾಗಿದ್ದು, ಅವರ ಮನೆಗೆ ದೊಡ್ಡ ಆಘಾತವಾಗಿದೆ. ಸರ್ಕಾರ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಫ್ಯಾಕ್ಟರಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬೆಳಗಾವಿ ಅಗ್ನಿ ದುರಂತ: ನಾಪತ್ತೆಯಾಗಿದ್ದ ಕಾರ್ಮಿಕ ಸುಟ್ಟು ಕರಕಲಾಗಿ ಪತ್ತೆ - Missing laborer found charred