ಮೈಸೂರು: "ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡಿದಿದೆ ಎಂದು ನಮಗೆ ಅನುಮಾನವಿದೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ(ಇ.ಡಿ) ತನಿಖೆ ನಡೆಸುವುದು ಸೂಕ್ತ ಎಂದು ಈಗಾಗಲೇ ಇ- ಮೇಲ್ ಮೂಲಕ ಮನವಿ ಪತ್ರ ಕಳುಹಿಸಿದ್ದೇನೆ. ನಾಳೆ(ಸೋಮವಾರ) ಅಧಿಕೃತವಾಗಿ ಇ.ಡಿ ಕಚೇರಿಗೆ ಒಂದು ಪ್ರತಿಯನ್ನು ಕೊಟ್ಟು, ಸ್ವೀಕೃತಿ ಪತ್ರ ಪಡೆಯುತ್ತೇನೆ" ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತಿಳಿಸಿದರು.
"ಸಿದ್ದರಾಮಯ್ಯನವರ ಪ್ರಕರಣ ಉದಾಹರಣೆಗೆ ಇಟ್ಟುಕೊಂಡು ಮುಡಾದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬುದೇ ನನ್ನ ಉದ್ದೇಶ. 2015 ರಿಂದ ಇಲ್ಲಿಯವರೆಗೆ ಮುಡಾದಲ್ಲಿ 50-50 ಅನುಪಾತದಲ್ಲಿ ಸೈಟು ಹಂಚಿಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಅರ್ಹ ಫಲಾನುಭವಿಗಳಿಗೆ ನಿವೇಶನಗಳು ದೊರೆತಿಲ್ಲ. ಇದಕ್ಕಾಗಿ ನಾನು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದೇನೆ. ಈಗಾಗಲೇ ನಾವು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಮತ್ತು ಸಿಬಿಐ ತನಿಖೆ ನಡೆಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ. ಕೋರ್ಟ್ ವಿಚಾರಣೆ ನಡೆಸಿ ಸಿಬಿಐ ತನಿಖೆಗೆ ವಹಿಸಿದರೆ ಸಿಬಿಐ ತನಿಖೆ ಮಾಡಲಿದೆ" ಎಂದರು.
"ಈ ಹೋರಾಟ ಪ್ರಾರಂಭ ಮಾಡಿದಾಗಿನಿಂದ ನನ್ನ ವಿರುದ್ಧ 23 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಆ ಪೈಕಿ 8 ಪ್ರಕರಣಗಳಲ್ಲಿ ನ್ಯಾಯಾಲಯಗಳು ನಿರಪರಾಧಿ ಎಂದು ನನ್ನ ಪರವಾಗಿ ತೀರ್ಪು ನೀಡಿವೆ. ಇನ್ನೂ 9 ಪ್ರಕರಣಗಳಲ್ಲಿ ಪೊಲೀಸರ ತನಿಖೆ ಸುಳ್ಳು ಎಂದು ಸಾಬೀತಾಗಿದೆ. ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸುವ ಮೂಲಕ ನನ್ನ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮೊದಲಿನಿಂದಲೂ ನಡೆಯುತ್ತಿದೆ. ಇದ್ಯಾವುದಕ್ಕೂ ನಾನು ಹೆದರುವುದಿಲ್ಲ. ನನಗೆ ಏನೇ ಕಿರುಕುಳ ಕೊಟ್ಟರು, ಆರೋಪ ಹೊರಿಸಿದರು ನನ್ನ ಹೋರಾಟ ನಿಲ್ಲುವುದಿಲ್ಲ" ಎಂದು ಹೇಳಿದರು.