ಚಾಮರಾಜನಗರ: "ನನ್ನ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ" ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಸಿಎಂ ವಿರುದ್ಧ ಎಫ್ಐಆರ್ ದಾಖಲಾದ ಬಗ್ಗೆ ಚಾಮರಾಜನಗರದಲ್ಲಿ ಅವರು ಮೊದಲ ಪ್ರತಿಕ್ರಿಯೆ ನೀಡಿದರು.
ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ: "ನನ್ನ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ. ಮೇಲಾಧಿಕಾರಿಗಳು ಒತ್ತಡ ಹೇರಿದ್ದರಿಂದ ಲೋಕಾಯುಕ್ತ ಎಸ್ಪಿ ಎಫ್ಐಆರ್ ದಾಖಲು ಮಾಡಿದ್ದಾರೆ. ಪ್ರಾಮಾಣಿಕ ಹೋರಾಟಕ್ಕೆ ಯಾವಾಗಲೂ ಜಯ ಎಂಬುದಕ್ಕೆ ಇದೊಂದು ಉದಾಹರಣೆ. ಶ್ರೀಸಾಮಾನ್ಯ ಹೋರಾಟ ಮಾಡಿ ಭ್ರಷ್ಟ ಮುಖ್ಯಮಂತ್ರಿಗೆ ಶಿಕ್ಷೆ ಕೊಡಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಎಫ್ಐಆರ್ ದಾಖಲಾಗಿದ್ದರೂ ಕೂಡ ಈ ಕೇಸ್ ಅನ್ನು ಸಿಬಿಐಗೆ ವಹಿಸುವಂತೆ ಕೋರ್ಟ್ಗೆ ಅರ್ಜಿ ಹಾಕುತ್ತೇನೆ. ಎಫ್ಐಆರ್ ದಾಖಲು ಮಾಡಲು ಆರಂಭದಲ್ಲೇ ಇಷ್ಟು ಆಟ ಆಡಿದರೇ, ನಿಷ್ಪಕ್ಷಪಾತ ತನಿಖೆ ಅಸಾಧ್ಯ" ಎಂದು ಅವರು ಲೋಕಾಯುಕ್ತ ಪೊಲೀಸ್ ತನಿಖೆ ಬಗ್ಗೆ ಅಸಮಾಧಾನ ಹೊರಹಾಕಿದರು.
"ಶೀಘ್ರವಾಗಿ ಕ್ರಮ ಕೈಗೊಳ್ಳದೇ, ಲೋಕಾಯುಕ್ತ ಎಸ್ಪಿ ನ್ಯಾಯಾಂಗ ನಿಂದನೆ ಮಾಡಿದ್ದು, ಅವರಿಗೂ ಶಿಕ್ಷೆ ಕೊಡಿಸುತ್ತೇನೆ" ಎಂದು ಸ್ನೇಹಮಯಿ ಕೃಷ್ಣ ಹೇಳಿದರು.
"ಈ ಪ್ರಕರಣವನ್ನು ಸಿಬಿಐಗೆ ಕೊಡಿಸಿಯೇ ಕೊಡಿಸುತ್ತೇನೆ. ಒಂದು ಮೊಬೈಲ್ ಫೋನ್ ಕರೆಗೆ ಹೆದರಿಕೊಳ್ಳುವಂತ ಎಸ್ಪಿ ಪ್ರಾಮಾಣಿಕ ತನಿಖೆ ನಡೆಸುತ್ತಾರಾ? ಪ್ರಕರಣ ಸಿಬಿಐಗೆ ಹೋಗುವ ತನಕ ನಿರಂತರ ಹೋರಾಟ ಮಾಡುತ್ತೇನೆ. ಸೋಮವಾರ ಹೈಕೋರ್ಟ್ನಲ್ಲಿ ನಮ್ಮ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಈ ಹಿಂದೆ ತನಿಖಾ ಸಂಸ್ಥೆಗಳಿಗೆ ನ್ಯಾಯಾಲಯ ಛೀಮಾರಿ ಹಾಕಿದೆ" ಎಂದರು.
ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡಲ್ಲವೆಂಬ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಒಂದೊಂದು ಸಮಯಕ್ಕೆ ಸಿಎಂ ಸಿದ್ದರಾಮಯ್ಯ ಒಂದೊಂದು ರೀತಿ ವರ್ತಿಸಿದ್ದಾರೆ. ಬೇರೆಯವರ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಸಿಎಂ ತಮ್ಮ ವಿರುದ್ಧ ದೂರು ದಾಖಲಾದಾಗ ಉಲ್ಟಾ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ" ಎಂದರು.
ಇದನ್ನೂ ಓದಿ: ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಎಫ್ಐಆರ್ - FIR Against CM Siddaramaiah
ರಾಜ್ಯದ ಇತಿಹಾಸದಲ್ಲೇ ಮೊದಲು ಎಂದ ಸ್ನೇಹಮಯಿ ಕೃಷ್ಣ: ಬಳಿಕ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸ್ನೇಹಮಯಿ ಕೃಷ್ಣ, ''ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲೆಯಾಗಿದೆ. ಇನ್ನುಮುಂದೆ ತನಿಖೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ. ಭಾಗಶಃ ಇದು ರಾಜ್ಯದ ಇತಿಹಾಸದಲ್ಲೇ ಮೊದಲೆಂದು ಭಾವಿಸುತ್ತೇನೆ. ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ ವಿರುದ್ಧ, ಅವರ ಅಕ್ರಮಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿರುವುದು ರಾಜ್ಯದಲ್ಲಿ ಇದೇ ಮೊದಲು'' ಎಂದರು.
''ಇದಕ್ಕೆಲ್ಲ ಜನರ ಬೆಂಬಲ ಹಾಗೂ ನನ್ನ ಹಿಂದೆ ಸಾಮಾಜಿಕ ಕಳಕಳಿ ಉಳ್ಳವರ ಒಂದು ತಂಡ ನನ್ನ ಬೆನ್ನ ಹಿಂದೆ ನಿಂತು ಕೆಲಸ ಮಾಡಿದೆ. ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಕಾಣುವವರೆಗೂ, ಸಿದ್ದರಾಮಯ್ಯನವರು ಮುಡಾದಿಂದ ಪಡೆದ ಅಕ್ರಮ ಸೈಟ್ಗಳನ್ನು ಹಿಂದಿರುಗಿಸಿ, ಅರ್ಹ ಫಲಾನುಭವಿಗಳಿಗೆ ಕೊಡುವವರೆಗೂ ನನ್ನ ಹೋರಾಟ ಇದ್ದೇ ಇರುತ್ತದೆ'' ಎಂದು ತಿಳಿಸಿದರು.
ಸಿಬಿಐ ತನಿಖೆಗೆ ಆಗ್ರಹಿಸಿ ಅರ್ಜಿ: ''ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಅರ್ಜಿ ಹಾಕಿದ್ದೇವೆ. ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ಸಿಬಿಐ ಸೂಕ್ತವಾಗಿದೆ. ಮುಖ್ಯಮಂತ್ರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ನಿಯಮ ಕೂಡ ಇದೆ. 50 ಕೋಟಿ ರೂ.ಗಿಂತ ಹೆಚ್ಚಿಗೆ ಅಕ್ರಮ ನಡೆದರೆ ಅದನ್ನು ಸಿಬಿಐ ತನಿಖೆ ನಡೆಸಬೇಕು ಎಂಬುದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡಸಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದೇವೆ'' ಎಂದು ಹೇಳಿದರು.
''ರಾಜ್ಯ ಸರ್ಕಾರ ವ್ಯಾಪ್ತಿಗೆ ಬರುವ ತನಿಖಾ ಸಂಸ್ಥೆಗಳ ಮೇಲೆ ಸರ್ಕಾರ ತನ್ನ ಪ್ರಭಾವ ಬೀರುತ್ತದೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐಗೆ ಕೂಡುವುದು ಉತ್ತಮ ಎಂದು ಅರ್ಜಿಯನ್ನು ಸಲ್ಲಿಸಿದ್ದೇವೆ. ಲೋಕಾಯುಕ್ತ ಎಸ್ಪಿ ಅವರು ಯಾವಾಗ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ'' ಎಂದು ಇದೇ ವೇಳೆ ತಿಳಿಸಿದರು.