ಬೆಂಗಳೂರು: ಸಿಲಿಕಾನ್ ಸಿಟಿಗೆ ಐಟಿ ನಗರಿ ಗರಿಮೆ ತಂದುಕೊಟ್ಟಿದ್ದ ಎಸ್. ಎಂ ಕೃಷ್ಣ ಅವರಿಗೂ ತಮ್ಮ ಆಡಳಿತ ಅವಧಿಯಲ್ಲಿ ಕಾವೇರಿ ಸಮಸ್ಯೆ ತಪ್ಪಿರಲಿಲ್ಲ. ಇದನ್ನು ಸಮರ್ಧವಾಗಿ ನಿಭಾಯಿಸಿದ್ದ ನಾಯಕ ತಮ್ಮ ಅಧಿಕಾರಾವಧಿಯಲ್ಲಿ ತಮಿಳುನಾಡಿಗೆ ನೀರು ಬಿಡದೆ ಪಾದಯಾತ್ರೆ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಆದರೆ, ಸುಪ್ರೀಂಕೋರ್ಟ್ ಚಾಟಿಗೆ ತಲೆ ಬಾಗಿ, ನ್ಯಾಯಾಲಯಕ್ಕೆ ಕ್ಷಮೆಯಾಚಿಸಿ ನೀರು ಬಿಡಲೇಬೇಕಾಯಿತು.
ಸಾಲು ಸಾಲು ಸಂಕಷ್ಟದಲ್ಲೂ ಸಮರ್ಥ ಆಡಳಿತ: 1999 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಸ್.ಎಂ ಕೃಷ್ಣಗೆ ಸಾಲು ಸಾಲು ಸಂಕಷ್ಟಗಳು ಎದುರಾಗಿದ್ದವು. ಒಂದೆಡೆ ಸತತ ಮೂರು ವರ್ಷ ಬರ ಎದುರಿಸುತ್ತಿದ್ದರೆ, ಇತ್ತ ಕಾವೇರಿ ವಿವಾದದ ಕೂಡ ಭುಗಿಲೆದಿತ್ತು. 2002 ರಲ್ಲಿ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿ ಬರಗಾಲ ಸೃಷ್ಟಿಯಾಯಿತು. ತಮಿಳುನಾಡಿಗೆ ವಾಡಿಕೆಯಂತೆ ಕಾವೇರಿ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀರಿನ ಕೊರತೆಯಿಂದಾಗಿ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸಲಿಲ್ಲ. ಇದರಿಂದ ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್ ಕದತಟ್ಟಿತು. ತಮಿಳುನಾಡು ಕೋರಿಕೆ ಪರಿಗಣಿಸಿದ ಸುಪ್ರೀಂಕೋರ್ಟ್ ಸಂಕಷ್ಟದ ಸಮಯದಲ್ಲಿಯೂ ಪ್ರತಿದಿನ 1.25 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿತ್ತು.
ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ರಾಜ್ಯಾದ್ಯಂತ ವಿಶೇಷವಾಗಿ ಕಾವೇರಿ ಕೊಳ್ಳದ ಭಾಗದಲ್ಲಿ ತೀವ್ರ ಹೋರಾಟ, ಪ್ರತಿಭಟನೆಗಳು ನಡೆದು ಹಿಂಸಾಚಾರ ಶುರುವಾಯಿತು. ರಾಜ್ಯ ಬಂದ್ ಕೂಡ ನಡೆಯಿತು. ರೈತರ ಹೋರಾಟದ ನಡುವೆಯೇ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲು ರಾಜ್ಯ ಸರ್ಕಾರ ನೀರು ಬಿಟ್ಟಿತು. ನೀರು ಹರಿಸುವುದನ್ನು ಖಂಡಿಸಿ ಗುರುಸ್ವಾಮಿ ಎನ್ನುವ ರೈತ ಕಬಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿ, ರೈತರ ಹೋರಾಟಕ್ಕೆ ಮಣಿದ ಸಿಎಂ ಆಗಿದ್ದ ಎಸ್. ಎಂ. ಕೃಷ್ಣ ಅವರು ತಕ್ಷಣವೇ ನೀರು ನಿಲ್ಲಿಸಿ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಘೋಷಿಸಿದ್ದರು.
ಪಾದಯಾತ್ರೆ ನಡೆಸಿದ್ದ ಕೃಷ್ಣ: ಕಾವೇರಿಗಾಗಿ ಸ್ವತಃ ಮುಖ್ಯಮಂತ್ರಿಯಾಗಿದ್ದ ಎಸ್. ಎಂ ಕೃಷ್ಣ 2002 ಅ.7ರಿಂದ ಅ.11ರ ವರೆಗೆ 6 ದಿನಗಳ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಮಂಡ್ಯದವರೆಗೆ 100 ಕಿ. ಮೀ. ದೂರ ಪಾದಯಾತ್ರೆ ನಡೆಸಿದ್ದರು. ನೀರು ಹಂಚಿಕೆ ವಿಚಾರ ಸುಪ್ರೀಂಕೋರ್ಟ್ ಮುಂದೆ ಇದ್ದಿದ್ದರಿಂದ ಈ ಪಾದಯಾತ್ರೆಗೆ ಭಾರಿ ಆಕ್ಷೇಪ ವ್ಯಕ್ತವಾಯಿತು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರೇ ಕೆಆರ್‌ಎಸ್‌ಗೆ ಪಾದಯಾತ್ರೆ ನಡೆಸಿದ್ದರಿಂದ ತಮಿಳುನಾಡು ಸರ್ಕಾರ, ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರದ ಈ ನಡೆಗೆ ಛೀಮಾರಿ ಹಾಕಿ ತಮಿಳುನಾಡಿಗೆ ನೀರು ಬಿಡಲು ತಾಕೀತು ಮಾಡಿತ್ತು. ಕೋರ್ಟ್‌ನ ಆದೇಶ ಪಾಲನೆ ಮಾಡಲು ಸಾಧ್ಯವಾಗದಿದ್ದಲ್ಲಿ ಅಧಿಕಾರದಿಂದ ಕೆಳಗಿಳಿಯುವಂತೆಯೂ ತೀಕ್ಷ್ಣವಾಗಿ ಸೂಚಿಸಿತ್ತು. ಹೀಗಾಗಿ, ಪಾದಯಾತ್ರೆ ಮೊಟಕುಗೊಳಿಸಿದ್ದ ಕೃಷ್ಣ ನೀರು ಬಿಡುವಂತಾಗಿತ್ತು.
ಕಾವೇರಿ ನೀರು ಬಿಡುವ ನಿರ್ದೇಶನ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಮಾಡಿದ್ದರಿಂದಾಗಿ ಒಂದು ನ್ಯಾಯಾಲಯದ ಕ್ಷಮೆ ಕೇಳಬೇಕು ಅಥವಾ ಅಧಿಕಾರದಿಂದ ಕೆಳಗಿಳಿದು ಜೈಲಿಗೆ ಹೋಗಬೇಕು ಎನ್ನುವ ಆಯ್ಕೆ ಮಾತ್ರ ಕೃಷ್ಣ ಮುಂದಿತ್ತು. ನಾಡಿನ ಹಿತಾಸಕ್ತಿ ಗಮನಿಸಿದ್ದ ಕೃಷ್ಣ ನ್ಯಾಯಾಲಯದ ಕ್ಷಮೆ ಕೇಳಿ ತಮಿಳುನಾಡಿಗೆ ನೀರು ಬಿಟ್ಟಿದ್ದರು. ಇದಕ್ಕೂ ಮೊದಲು ಬಂಗಾರಪ್ಪ ಸುಗ್ರೀವಾಜ್ಞೆ ಮೂಲಕ ಕಾವೇರಿ ನೀರು ಹರಿಸದಿರುವ ಗಟ್ಟಿ ನಿಲುವು ತಳೆದಿದ್ದಂತೆ ಎಸ್.ಎಂ ಕೃಷ್ಣ ಕೂಡ ಕಾವೇರಿ ವಿಚಾರದಲ್ಲಿ ಬದ್ಧತೆಯೊಂದಿಗೆ ಗಟ್ಟಿ ನಿಲುವು ತಳೆದಿದ್ದರು.
ಇದನ್ನೂ ಓದಿ: ಅಜಾತಶತ್ರು ಎಸ್. ಎಂ. ಕೃಷ್ಣ ರಾಜಕೀಯ ಜೀವನ ಹೇಗಿತ್ತು?