ಬೆಂಗಳೂರು: ರಾಜ್ಯ ಕಂಡ ಅಪರೂಪದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರು ಎಸ್.ಎಂ.ಕೃಷ್ಣ. ರಾಜ್ಯದ ಅಭಿವೃದ್ಧಿ ಪಥದಲ್ಲಿ ಅಚ್ಚಳಿಯದಂತಹ ಹೆಜ್ಜೆ ಗುರುತಿನ ಅವಧಿ ಅವರದು. ಅವರ ರಾಜಕೀಯ ಜೀವನ ಮತ್ತು ವೈಯಕ್ತಿಕ ಬದುಕಿನ ಅನೇಕ ಸ್ವಾರಸ್ಯಕರ ಘಟನೆಗಳ ಒಂದು ಮೆಲುಕು ನೋಟ ಇಲ್ಲಿದೆ.
ಮೊದಲ ಗೆಲುವಿಗೆ ಅಸಿಂಧು ಕುಣಿಕೆ: ಎಸ್.ಎಂ. ಕೃಷ್ಣ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಮೊದಲು ಗೆಲುವು ಸಾಧಿಸಿದ್ದು ಅಸಿಂಧು ಕುಣಿಕೆಗೆ ಸಿಲುಕುವಂತಾಯಿತು. 1962ರಲ್ಲಿ ಮೊದಲ ಬಾರಿ ಮದ್ದೂರಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಕಾಂಗ್ರೆಸ್‌ನ ಪ್ರಭಾವಿ ನಾಯಕ ವೀರಣ್ಣಗೌಡರನ್ನು ಸೋಲಿಸಿದ್ದರು. ಆದರೆ, ವೀರಣ್ಣಗೌಡರು ಸೆಷನ್ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಹಾಕಿ, ಶಾಸಕತ್ವ ರದ್ದು ಪಡಿಸಬೇಕು ಎಂದು ಅಪೀಲು ಹಾಕಿದ್ದರು. ಕೋರ್ಟ್ ಕೃಷ್ಣ ಅವರ ಮದ್ದೂರು ಚುನಾವಣೆ ಗೆಲುವು ಅಸಿಂಧು ಎಂದು ಆದೇಶಿಸಿತ್ತು. ಅಲ್ಲದೆ, ಅವರು ಆರು ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ ಎಂಬ ಆದೇಶ ನೀಡಿತ್ತು. ಇದು ದೊಡ್ಡ ಸುದ್ದಿಯಾಗಿತ್ತು. ಬಳಿಕ ಎಸ್.ಎಂ. ಕೃಷ್ಣ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರು. ಭಾರೀ ವಾದ- ಪ್ರತಿವಾದಗಳ ಬಳಿಕ ಹೈಕೋರ್ಟ್‌ನಲ್ಲಿ ಕೃಷ್ಣ ಆಯ್ಕೆ ಸಿಂಧು ಎಂದು ತೀರ್ಪು ಹೊರಬಿದ್ದಿತ್ತು.
ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ ಪರ ಪ್ರಚಾರ: ಎಸ್. ಎಂ. ಕೃಷ್ಣ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನೆಡಿ ಪರ ಪ್ರಚಾರ ನಡೆಸಿದ್ದರು. 1961ರಲ್ಲಿ ತಮ್ಮ 28ನೇ ವಯಸ್ಸಿನಲ್ಲಿ ಎಸ್.ಎಂ. ಕೃಷ್ಣ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಈ ವೇಳೆ ಎಸ್ಎಂಕೆ ಕೆನಡಿಗೆ ಪತ್ರ ಬರೆದು ಭಾರತೀಯರು ಹೆಚ್ಚಿರುವ ಸ್ಥಳಗಳಲ್ಲಿ ಪ್ರಚಾರ ಕಾರ್ಯ ನಡೆಸುವಂತೆ ಕೋರಿದ್ದರು. ಇದಕ್ಕೆ ಕೆನಡಿ ಒಪ್ಪಿದ್ದರು. ಎಸ್.ಎಂ. ಕೃಷ್ಣ ಅವರು ಕೆನಡಿ ಪರ ಪ್ರಚಾರ ನಡೆಸಿದ್ದಲ್ಲದೆ ಅವರ ಪರ ಮತ ಚಲಾಯಿಸಿದ್ದರು. ಬಳಿಕ ಜಾನ್ ಎಫ್. ಕೆನಡಿ ಅಮೆರಿಕದ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದರು. ನಂತರ ಕೆನಡಿ ಎಸ್.ಎಂ.ಕೃಷ್ಣಗೆ ವಾಪಸ್ ಪತ್ರ ಬರೆದು ಧನ್ಯವಾದ ತಿಳಿಸಿದ್ದರು.
ಮಲೆ ಮಹದೇಶ್ವರನ ಪರಮ ಭಕ್ತ: ಎಸ್.ಎಂ. ಕೃಷ್ಣ ಮಲೆ ಮಹದೇಶ್ವರನ ಪರಮ ಭಕ್ತರಾಗಿದ್ದು, ಇತ್ತೀಚೆಗೆವರೆಗೂ ದೇವಸ್ಥಾನಕ್ಕೆ ಹೋಗಿ ಮಲೆ ಮಹದೇಶ್ವರ ಸ್ವಾಮಿಯ ಆಶೀರ್ವಾದ ಪಡೆಯುತ್ತಿದ್ದರು. ಎಸ್.ಎಂ. ಕೃಷ್ಣ ಕೂಡ ತಮ್ಮ ಊರಿನವರ ಜೊತೆ ಹನೂರು ತನಕ ಬಸ್ ನಲ್ಲಿ ಹೋಗಿ ಬಳಿಕ ಕಾಲ್ನಡಿಗೆ ಮೂಲಕ ಬೆಟ್ಟಕ್ಕೆ ಹೋಗುತ್ತಿದ್ದರು. ಪ್ರತಿ ವರ್ಷ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ದರ್ಶನ ಪಡೆಯದಿದ್ದರೆ, ಏನೋ ಕಳೆದುಕೊಂಡ ಅನುಭವ ಆಗುತ್ತದೆ ಎಂದು ಎಸ್.ಎಂ.ಕೃಷ್ಣ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಸಿಎಂ ಸ್ಥಾನ ಕೈತಪ್ಪಿ ಡಿಸಿಎಂ ಆದ ಎಸ್ಎಂಕೆ: 1992ರಲ್ಲಿ ಎಸ್. ಬಂಗಾರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿದ ಬಳಿಕ ಯಾರು ಸಿಎಂ ಎಂಬ ಚರ್ಚೆ ನಡೆದಿತ್ತು. ಆ ವೇಳೆ ಎಸ್.ಎಂ. ಕೃಷ್ಣ ಪರ ಕೆಲ ಶಾಸಕರು ಬ್ಯಾಟಿಂಗ್ ಮಾಡಿದರೆ, ಇನ್ನೂ ಕೆಲವರು ರಾಜಶೇಖರ್ ಪರ ಬ್ಯಾಟಿಂಗ್ ಮಾಡಿದ್ದರು. ಆದರೆ. ಆಗಿನ ಪ್ರಧಾನಿ ನರಸಿಂಹ ರಾವ್ ಅವರು ಕೃಷ್ಣರನ್ನು ಸಿಎಂರನ್ನಾಗಿ ಮಾಡಲು ಒಲವು ವ್ಯಕ್ತಪಡಿಸಿದ್ದರು. ಆಗಿನ ಆಂಧ್ರಪ್ರದೇಶ ಸಿಎಂರಾಗಿದ್ದ ವಿಜಯ್ ಭಾಸ್ಕರ್ ರೆಡ್ಡಿ ದೆಹಲಿಯಿಂದ ಕೃಷ್ಣಗೆ ಕರೆ ಮಾಡಿ ನಿಮ್ಮ ಹೆಸರನ್ನು ಮುಂದಿನ ಸಿಎಂ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ ಎಂದು ದೃಢಪಡಿಸಿದ್ದರು. ಆದರೆ, ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹಠಾತ್ ವೀರಪ್ಪ ಮೊಯ್ಲಿ ಹೆಸರು ಪ್ರಸ್ತಾಪ ಆಗಿತ್ತು. ನರಸಿಂಹ ರಾವ್ ಸೇರಿ ಕಾಂಗ್ರೆಸ್ ಹಿರಿಯ ಮುಖಂಡರ ಒತ್ತಾಯದ ಮೇರೆಗೆ ಎಸ್.ಎಂ. ಕೃಷ್ಣ ರಾಜ್ಯದ ಮೊದಲ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಅಂದು ಬಹುತೇಕ ಶಾಸಕರ ಒಮ್ಮತ ಇದ್ದರೂ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಎಸ್.ಎಂ.ಕೃಷ್ಣರಿಗೆ ತೀವ್ರ ಬೇಸರವಾಗಿತ್ತು.
ತಿರುಪತಿ ಹುಂಡಿ- ವಾಚ್ ಪವಾಡ: 1983ರಲ್ಲಿ ಎಸ್.ಎಂ.ಕೃಷ್ಣ ಅವರು ತಿರುಪತಿಗೆ ಹೋಗಿದ್ದಾಗ, ವೆಂಕಟೕಶ್ವರ ಸ್ವಾಮಿಯ ಮಂಗಳಾರತಿ ತೆಗೆದುಕೊಳ್ಳಬೇಕಾದರೆ ಆಚಾನಕ್ ಆಗಿ ಅವರ ವಾಚು ಕಳಚಿತ್ತು. ಅರ್ಚಕರು ಇದನ್ನು ಗಮನಿಸಿ ಆ ವಾಚ್ ದೇವರ ಹುಂಡಿಗೆ ಹಾಕಿ ಎಂದು ಸಲಹೆ ನೀಡಿದರು. ಎಸ್ಎಂಕೆ ಮರುಮಾತನಾಡದೆ ವಾಚನ್ನು ದೇವರಿಗರ್ಪಿಸಿ ಬಂದಿದ್ದರು. ಇದಾದ ಬಳಿಕ ಅದೇ ದಿನ ರಾತ್ರಿ ದಿಲ್ಲಿಯಿಂದ ಕರೆ ಬಂದಿತ್ತು. ಅದರಂತೆ ಮರುದಿನ ದಿಲ್ಲಿಗೆ ಹೋದಾಗ ಕೇಂದ್ರ ಸರ್ಕಾರದಲ್ಲಿ ಕೈಗಾರಿಕಾ ಸಹಾಯಕ ಮಂತ್ರಿಯಾಗಿ ನಾನು ಆಯ್ಕೆ ಆದೆ ಎಂಬ ಬಗ್ಗೆ ತಿಳಿಸಿದ್ದರು.
ಭೂಮಿ ತಂತ್ರಜ್ಞಾನ ತಂದ ಹಿರಿಮೆ: ಎಸ್.ಎಂ. ಕೃಷ್ಣ ಸದಾ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ತೆರೆದುಕೊಂಡು, ಅದನ್ನು ಜನರಿಗೆ ತಲುಪಿಸುವ ಕಾರ್ಯವೂ ಮಾಡುತ್ತಿದ್ದರು. ಇದರ ಫಲವಾಗಿ 1999ರಲ್ಲಿ ಅವರು ತಾಲೂಕು ಕೇಂದ್ರಗಳಲ್ಲಿ ಭೂಮಿ ತಂತ್ರಜ್ಞಾನಕ್ಕೆ ಚಾಲನೆ ನೀಡಿದರು. ಆ ಮೂಲಕ ರೈತರಿಗೆ ಅನುಕೂಲವಾಗುವಂತೆ ಪಹಣಿ, ಆಸ್ತಿ ವಿವರ, ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ನಾಂದಿ ಹಾಡಿದ್ದರು. ಇಂದು ಕರ್ನಾಟಕದಲ್ಲಿ ಭೂಮಿ ತಂತ್ರಜ್ಞಾನದ ಮೂಲಕ ರಾಜ್ಯದ ಜನರು ಸಾಕಷ್ಟು ಅನುಕೂಲ ಪಡೆಯುತ್ತಿದ್ದಾರೆ.
ಕರ್ನಾಟಕದ ಅತ್ಯಂತ ಸುಶಿಕ್ಷಿತ ಮುಖ್ಯಮಂತ್ರಿ: ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರಾಗಿದ್ದಾರೆ. ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಬಳಿಕ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ ನಂತರ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದಿದ್ದರು. ಆಂಗ್ಲ ಭಾಷೆ ಹಾಗೂ ಕನ್ನಡ ಭಾಷೆಯನ್ನು ಅತ್ಯಂತ ಸ್ಫುಟವಾಗಿ ಮಾತನಾಡುತ್ತಿದ್ದ ನಾಯಕ ಅವರಾಗಿದ್ದರು.
ಕ್ರಿಕೆಟ್ ಹುಚ್ಚಿಗೆ ಚುನಾವಣೆ ಸೋತ ಎಸ್ಎಂಕೆ: 1967ರ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ಎಸ್.ಎಂ. ಕೃಷ್ಣ ಅವರು ತಮ್ಮ ಕ್ರಿಕೆಟ್ ಕ್ರೇಜ್ ನಿಂದಾಗಿ ಸೋಲು ಅನುಭವಿಸಿದ ಘಟನೆ ನಡೆದಿತ್ತು. ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ (ಪಿಎಸ್ಪಿ)ತಮ್ಮ ರಾಜಕೀಯ ಬದುಕು ಆರಂಭಿಸಿದ್ದ ಕೃಷ್ಣ 1967ರ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದರು. ಪಿಎಸ್ ಪಿ ಪಕ್ಷ ಅಂದು ರಾಜ್ಯದಲ್ಲಿ ಸುಮಾರು 60 ಸ್ಥಾನಗಳಲ್ಲಿ ಸ್ಪರ್ಧೆಗೆ ಇಳಿದಿತ್ತು. ಅದರಲ್ಲಿ ಸುಮಾರು 20 ಕ್ಷೇತ್ರಗಳಲ್ಲಿ ಕೃಷ್ಣ ಪ್ರಚಾರ ನಡೆಸುತ್ತಿದ್ದರು. ಅದೇ ಸಮಯದಲ್ಲಿ ಮದ್ರಾಸ್ ನಲ್ಲಿ ವೆಸ್ಟ್ಇಂಡೀಸ್- ಭಾರತದ ನಡುವೆ ಐದು ದಿನಗಳ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಅಗಾಧ ಕ್ರಿಕೆಟ್ ಅಭಿಮಾನಿಯಾಗಿದ್ದ ಎಸ್.ಎಂ.ಕೃಷ್ಣ ಚುನಾವಣೆ ಪ್ರಚಾರ ಬಿಟ್ಟು ಮದ್ರಾಸ್ ಗೆ ತೆರಳಿ ಐದು ದಿನ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದರು. ಇದು ಅವರಿಗೆ ಚುನಾವಣೆಯಲ್ಲಿ ದುಬಾರಿಯಾಗಿ ಪರಿಣಮಿಸಿ ಮದ್ದೂರು ಕ್ಷೇತ್ರದಲ್ಲಿ ಸೋಲು ಅನುಭವಿಸಬೇಕಾಯಿತು. ಮದ್ದೂರು ಜನ ನನ್ನನ್ನು ಗೆದ್ದೇ ಗೆಲ್ಲಿಸುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಅವರಿಗೆ ಕ್ರಿಕೆಟ್ ಪ್ರೇಮ ಸೋಲಿನ ರುಚಿ ಕಾಣಿಸಿತ್ತು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಮೊದಲ ಲೋಕಸಭೆ ಸ್ಪರ್ಧೆ ಹಿಂದಿದೆ ಸ್ವಾರಸ್ಯಕರ ಪ್ರಹಸನ: 1967ರ ಸೋಲಿನ ಬಳಿಕ ಭಾರೀ ಬೇಸರಕ್ಕೆ ಒಳಗಾದ ಅವರು, ರಾಜಕೀಯ ತೊರೆದು ಉಪನ್ಯಾಸ ವೃತ್ತಿಗೆ ಮರಳುಬೇಕು ಎಂಬ ಮನಸ್ಥಿತಿಗೆ ಬಂದಿದ್ದರು. ಆ ಸಂದರ್ಭ ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದ ಶಿವನಂಜಪ್ಪ ಅವರು ನಿಧನರಾಗಿ 1968ರಲ್ಲಿ ಉಪಚುನಾವಣೆ ಎದುರಾಗಿತ್ತು. ಅವರ ಸ್ಥಾನಕ್ಕೆ ಕೃಷ್ಣರನ್ನು ನಿಲ್ಲಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆಗ ಸಂಯುಕ್ತ ವಿರೋಧ ಪಕ್ಷದ ಅಧ್ಯಕ್ಷರಾಗಿದ್ದ ಸಾಹುಕಾರ್ ಚೆನ್ನಯ್ಯರು ಬಂದು ಸ್ಪರ್ಧಿಸುವಂತೆ ಕೇಳಿದಾಗ ಕೃಷ್ಣ ಹಿಂದಿನ ಸೋಲಿನ ಬೇಸರದಲ್ಲಿ ಬೇರೆಯವರನ್ನು ನಿಲ್ಲಿಸಿ, ನಾನು ಸ್ಪರ್ಧಿಸಲ್ಲ ಎಂದು ಹೇಳಿದ್ದರು. ಬಳಿಕ ಸುದರ್ಶನ ಅತಿಥಿ ಗೃಹದಲ್ಲಿ ಸಂಯುಕ್ತ ವಿಪಕ್ಷಗಳ ಶಾಸಕರ ಸಭೆ ನಡೆಸಲಾಯಿತು. ಆ ವೇಳೆ ಸಾಹುಕಾರ್ ಚೆನ್ನಯ್ಯನವರು, ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ದೇವರು ಬಂದಿದ್ದ ಕೃಷ್ಣನನ್ನು ನಿಲ್ಲಿಸು ನಾನು ಗೆಲ್ಲಿಸಿಕೊಡುತ್ತೇನೆ ಅಂತ ಹೇಳಿದ್ದಾನೆ. ಹಾಗಾಗಿ ಎಸ್.ಎಂ.ಕೃಷ್ಣ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿ ಬಿಟ್ಟಿದ್ದರು. ಹೀಗೆ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ಅವರು ಸಂಸತ್ ಪ್ರವೇಶಿಸಿದ್ದರು.
ಇದನ್ನೂ ಓದಿ: ಕಾವೇರಿ ವಿವಾದ ಸಮರ್ಥವಾಗಿ ನಿಭಾಯಿಸಿದ್ದ ಚತುರ: ತಮಿಳುನಾಡಿಗೆ ನೀರು ಬಿಡದೆ ಪಾದಯಾತ್ರೆ ನಡೆಸಿದ್ದ ಕೃಷ್ಣ