ಬೆಂಗಳೂರು: ವಿದ್ಯಾರ್ಥಿಗಳು, ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗವು ಸೋಮವಾರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ರಾಜ್ಯ ವಕ್ತಾರ ಹೆಚ್.ವೆಂಕಟೇಶ್ ದೊಡ್ಡೇರಿ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮತ್ತಿತರ ಪ್ರಮುಖರು ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದರು.
ಶಿವರಾಜ್ ತಂಗಡಗಿ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡುತ್ತಾ, ಚುನಾವಣೆಯಲ್ಲಿ ಮತ ಕೇಳಲು ಇವರಿಗೆ ನಾಚಿಕೆಯಾಗಬೇಕು. ವಿದ್ಯಾರ್ಥಿಗಳು, ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂದು ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಎತ್ತಿಕಟ್ಟಿ, ದ್ವೇಷ ಭಾವನೆ ಮೂಡುವಂತೆ ಮಾಡಿ ಮತದಾರರ ಮೇಲೆ ಹಲ್ಲೆ ಮಾಡುವಂತೆ ಪ್ರಚೋದಿಸಿದ್ದಾರೆ. ಇಂತಹ ಹೇಳಿಕೆಯಿಂದ ಮತದಾರರು ಮತದಾನದಿಂದ ದೂರ ಉಳಿಯುವ ಸಾಧ್ಯತೆ ಇದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಬಿಜೆಪಿ ಕೋರಿದೆ.
ಇದನ್ನೂ ಓದಿ: ನಾವು ಪಕ್ಷಕ್ಕೆ ದನದಂತೆ ದುಡಿದಿದ್ದೇವೆ, ಆದರೂ ನಮ್ಮನ್ನು ಸೈಡ್ ಲೈನ್ ಮಾಡ್ತಿದ್ದಾರೆ: ವಚನಾನಂದ ಶ್ರೀ - Lok Sabha Election
ಶಿವರಾಜ್ ತಂಗಡಗಿ ಹೇಳಿದ್ದೇನು?: ಕೊಪ್ಪಳದ ಕಾರಟಗಿಯಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಶಿವರಾಜ್ ತಂಗಡಗಿ, "ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ಏನಾಗಿದೆ ಇವತ್ತು ಉದ್ಯೋಗ ನೀಡಿದ್ದಾರಾ? ಇಲ್ಲವಲ್ಲ. ಆದರೂ ಇನ್ನೂ ಯುವಕರು, ವಿದ್ಯಾರ್ಥಿಗಳು ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಹೊಡೀಬೇಕು" ಎಂದಿದ್ದರು.
ತಂಗಡಗಿ ಹೇಳಿಕೆಗೆ ಆಕ್ಷೇಪ: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡೀಬೇಕು ಎಂಬ ಶಿವರಾಜ್ ತಂಗಡಗಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಪೋಸ್ಟರ್ಗಳನ್ನು ಹಾಕಿ ಅಭಿಯಾನ ಆರಂಭಿಸಿದ್ದಾರೆ. ಶಿವರಾಜ್ ತಂಗಡಗಿ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. 'ಅವರಿಗೆ ಸಂಸ್ಕೃತಿ ಅನ್ನೋದೇ ಗೊತ್ತಿಲ್ಲ, ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆ ಕೊಟ್ಟಿದ್ದಾರೆ. ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರ. ಸಿಎಂ ಆದವರು ಸಂಪುಟದಲ್ಲಿ ಇಂತಹ ವ್ಯಕ್ತಿಯನ್ನು ಇಟ್ಟುಕೊಳ್ಳಲ್ಲ' ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
'ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ದೊಡ್ಡವನಾಗುವೆ ಎಂಬ ಭ್ರಮೆಯಲ್ಲಿ ಹೀಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಕೆಲಸ ಕಾರ್ಯಗಳನ್ನು ನೋಡಿ ಯುವಕರನ್ನು ಅವರನ್ನು ಬೆಂಬಲಿಸುತ್ತಿದ್ದಾರೆ' ಎಂದು ಕನಕಗಿರಿ ಮಾಜಿ ಶಾಸಕ ಬಸವರಾಜ ದಡೇಸುಗೂರು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಬೇಕು: ಸಚಿವ ತಂಗಡಗಿ ಮಾತು, ಬಿಜೆಪಿಗರ ಆಕ್ರೋಶ - Minister Shivaraj Tangadagi