ಬೆಂಗಳೂರು: ಮುಂದಿನ ಗಗನಯಾನ ಯಾತ್ರೆಯನ್ನು ಕಣ್ತುಂಬಿಕೊಳ್ಳಲು ಭಾರತೀಯ ಅಂತರಿಕ್ಷ ಯಾತ್ರೆ ಶೀರ್ಷಿಕೆಯಲ್ಲಿ ನಗರದ ಜವಾಹರಲಾಲ್ ನೆಹರು ತಾರಾಲಯವು ಚಕಿತಗೊಳಿಸುವ ಸ್ಕೈ ಶೋ ಸಾಕ್ಷ್ಯಚಿತ್ರ ಪ್ರದರ್ಶನ ರೂಪಿಸಿದೆ. ಇದರ ಮೊದಲ ಪ್ರದರ್ಶನಕ್ಕೆ ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹಾಗೂ ಇಸ್ರೋ ಗಗನಯಾನ ಯೋಜನಾ ನಿರ್ದೇಶಕ ಆರ್.ಹಟನ್ ಚಾಲನೆ ನೀಡಿದ್ದಾರೆ.
ಭಾರತೀಯ ವಿಜ್ಞಾನಿಗಳ ಅಂತರಿಕ್ಷದ ಆರಂಭಿಕ ಹೆಜ್ಜೆ, ಮೈಲುಗಲ್ಲಾದ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿಗಳ ಉಡಾವಣೆಗಳನ್ನು ಆ್ಯನಿಮೇಷನ್, ಅತ್ಯಾಧುನಿಕ ವಿಡಿಯೋಗ್ರಫಿ ತಂತ್ರಜ್ಞಾನದ ಮೂಲಕ ಈ ಸ್ಕೈ ಶೋ ಮೂಡಿಬಂದಿದೆ. ಇಂದಿನಿಂದ ಸಾರ್ವಜನಿಕರಿಗೆ ಈ 30 ನಿಮಿಷದ ಸ್ಕೈ ಶೋ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಸೋಮವಾರ, ಎರಡನೇ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಗ್ಗೆ 10.30ರಿಂದ ಸೌಂಡಿಂಗ್ ರಾಕೆಟ್ಸ್ ಟು ಗಗನಯಾನ ಆಂಗ್ಲ ಭಾಷೆಯಲ್ಲಿ ಮತ್ತು 11.30 ರಿಂದ ಕನ್ನಡ ಭಾಷೆಯಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರದರ್ಶನವು ಮೇ ತಿಂಗಳವರೆಗೆ ನಡೆಯಲಿದೆ.
ಈ ಕುರಿತು ಮಾತನಾಡಿದ ಎ.ಎಸ್.ಕಿರಣ್ ಕುಮಾರ್, 1960ರಲ್ಲಿನ ಸೌಂಡಿಂಗ್ ರಾಕೆಟ್‌ನಿಂದ ಇಂದಿನ ಗಗನಯಾನದವರೆಗೆ ವಿವಿಧ ಹಂತಗಳನ್ನು ಮಕ್ಕಳಿಗೂ ಅರ್ಥವಾಗುವಂತೆ ಸರಳವಾಗಿ ರೂಪಿಸಲಾಗಿದೆ. ಚಂದ್ರಯಾನ 3ರ ಬಳಿಕ ವಿಶ್ವದಾದ್ಯಂತ ಹೆಚ್ಚಿನ ಯುವಕರಲ್ಲಿ ವಿಜ್ಞಾನ, ಬಾಹ್ಯಾಕಾಶ ಆಸಕ್ತಿ ಮೂಡಿದೆ. ಅದಕ್ಕೆ ಇಂತ ಶೋಗಳು ಹೆಚ್ಚು ನೀರೆರಯಲಿವೆ ಎಂದಿದ್ದಾರೆ.
ಇಸ್ರೋ ಗಗನಯಾನ ಯೋಜನಾ ನಿರ್ದೇಶಕ ಆರ್.ಹಟನ್, ಬಹುಸಂಖ್ಯೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳು, ವಿಜ್ಞಾನ ಅದರಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಭಾನುವಾರದಿಂದ ಸಾರ್ವಜನಿಕರಿಗೆ ಈ 30 ನಿಮಿಷದ ‘ಸ್ಕೈ ಶೋ’ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸೋಮವಾರ, ಎರಡನೇ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಗ್ಗೆ 10.30ರಿಂದ ಆಂಗ್ಲ ಭಾಷೆಯಲ್ಲಿ ಮತ್ತು 11.30ರಿಂದ ಕನ್ನಡ ಭಾಷೆಯಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರದರ್ಶನವು 2 ತಿಂಗಳವರೆಗೆ ನಡೆಯಲಿದ್ದು, ವೀಕ್ಷಕರ ಆಸಕ್ತಿ ಮೇರೆಗೆ ಪ್ರದರ್ಶನ ಮುಂದುವರೆಸಲಾಗುತ್ತದೆ ಎಂದು ತಾರಾಲಯದ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ಗಗನಯಾನ ಯೋಜನೆಗಾಗಿ ಸಿದ್ಧಗೊಳ್ಳುತ್ತಿರುವ ಭಾರತೀಯ ಗಗನಯಾತ್ರಿಗಳು; ಇಲ್ಲಿದೆ ಸಂಪೂರ್ಣ ಮಾಹಿತಿ - Space Flight Project