ಚಿಕ್ಕಮಗಳೂರು : ಮೇವು ತಿಂದು ಆರು ಮೂಕ ಪ್ರಾಣಿಗಳು ದಾರುಣವಾಗಿ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜೋಳದ ಚಿಗುರು ತಿಂದು ಆರು ಎಮ್ಮೆಗಳು ಸಾವನ್ನಪ್ಪಿದ್ದು, ಮೂವತ್ತಕ್ಕೂ ಹೆಚ್ಚು ಎಮ್ಮೆಗಳು, ಸಾವು - ಬದುಕಿನ ನಡುವೆ ಹೋರಾಟ ನಡೆಸಿವೆ. ಮೂಕ ಪ್ರಾಣಿಗಳ ಒದ್ದಾಟ ನೋಡಿ, ರೈತರು ಕಣ್ಣೀರು ಹಾಕಿದ್ದು, ಕೆಲ ಕಾಲ ಮೂಕ ಪ್ರಾಣಿಗಳ ನರಳಾಟಕ್ಕೆ ಕಾರಣ ತಿಳಿಯದೇ ರೈತರು ಪರದಾಟ ನಡೆಸಿದ್ದಾರೆ.
ಈ ವಿಷಯ ತಿಳಿದ ಕೂಡಲೇ ಶಾಸಕ ಹೆಚ್. ಡಿ ತಮ್ಮಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು, ಸರಿಯಾದ ಸಮಯಕ್ಕೆ ಪಶು ಪಾಲಿ ಕ್ಲಿನಿಕ್ ಹಾಗೂ ವೈದ್ಯರ ತಂಡ ಸ್ಥಳಕ್ಕೆ ಆಗಮಿಸಿದೆ. ನಂತರ ಮೂಕ ಪ್ರಾಣಿಗಳಿಗೆ ಉಪಚರಿಸಿ, ಚಿಕಿತ್ಸೆ ನೀಡಿದ್ದು, ವೈದ್ಯರ ಚಿಕಿತ್ಸೆ ನಂತರ ಮೇವು ತಿಂದು ನರಳಾಡುತ್ತಿದ್ದ 30ಕ್ಕೂ ಹೆಚ್ಚು ಎಮ್ಮೆಗಳ ಆರೋಗ್ಯ ಚೇತರಿಕೆ ಕಂಡಿದೆ. ಪಶು ಇಲಾಖೆಯ ಉಪ ನಿರ್ದೇಶಕ ಹೇಮಂತ್ ತಂಡದಿಂದ ಚಿಕಿತ್ಸೆ ನೀಡಲಾಗಿದ್ದು, ಮೇವಿನ ಕುರಿತಾಗಿ ರೈತರಿಗೆ ಸಲಹೆ ಹಾಗೂ ಸೂಚನೆ ನೀಡಿದ್ದಾರೆ.
ಸಾವನ್ನಪ್ಪಿದ ಎಲ್ಲ ಜಾನುವಾರುಗಳಿಗೆ ಸರ್ಕಾರದಿಂದ ಹಣ ಕೊಡಿಸಲಾಗುವುದು ಎಂದು ಇದೇ ಸಮಯದಲ್ಲಿ ರೈತರಿಗೆ ಶಾಸಕ ಹೆಚ್. ಡಿ ತಮ್ಮಯ್ಯ ಆಶ್ವಾಸನೆ ನೀಡಿದ್ದಾರೆ. ರೈತರು ಈ ಮಾತುಗಳನ್ನು ಕೇಳಿ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ಕಾರು ಚಾಲಕನ ಅಜಾಗರೂಕ ಚಾಲನೆ, 7 ಎಮ್ಮೆಗಳು ಸಾವು