ಬೆಂಗಳೂರು: ಬಿಟ್ ಕಾಯಿನ್ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸ್ನೇಹಿತೆ ಪೂಜಾ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಎಸ್‌ಐಟಿ ಅಧಿಕಾರಿಗಳು, ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಹ್ಯಾಕರ್ ಶ್ರೀಕಿ, ಬಿಟ್ ಕಾಯಿನ್ ಅಕ್ರಮದಲ್ಲಿ ಗಳಿಸಿದ ಹಣದಲ್ಲಿ ಪೂಜಾ ಭಟ್ ಕಾರು ಹಾಗೂ ಮನೆ ಖರೀದಿಸಿರುವ ಆರೋಪವಿದೆ. ಹೀಗಾಗಿ, ಪೂಜಾ ಭಟ್ ವಿಚಾರಣೆ ನಡೆಸಲು ನಿರ್ಧರಿಸಿ ನೋಟಿಸ್ ಜಾರಿ ಮಾಡಲಾಗಿದೆ. ತುರ್ತಾಗಿ ವಿಚಾರಣೆಗೆ ಬರುವಂತೆ ಅವರಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಸದ್ಯ ರಾಜಸ್ಥಾನದಲ್ಲಿರುವ ಪೂಜಾ ಭಟ್ ಶ್ರೀಕಿಯಿಂದ ಹಣ, ಕಾರು ಹಾಗೂ ಮನೆ ಪಡೆದುಕೊಂಡಿರುವ ಮಾಹಿತಿ ಇದೆ. ವಿಚಾರಣೆ ಬಳಿಕ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ: 2020ರಲ್ಲಿ ಕೆಂಪೇಗೌಡನಗರದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಿತ್ತು. ಪ್ರತ್ಯೇಕವಾಗಿ ಪ್ರಕರಣ ವರ್ಗಾಯಿಸಿಕೊಂಡು ಸಿಸಿಬಿ ತನಿಖೆ ನಡೆಸಿತ್ತು. ಕಳೆದ ವರ್ಷ ಎಸ್ಐಟಿ ರಚನೆಯಾಗುತ್ತಿದ್ದಂತೆ ಕೆಂಪೇಗೌಡನಗರ ನಗರದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸಿ ಒಂದನೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಶ್ರೀಕಿ, ಬಿಟ್ ಕಾಯಿನ್ ಮಾರಾಟಗಾರ ರಾಬಿನ್ ಖಂಡೇವಾಲಾ, ಸುಜಯ್ ಸೇರಿದಂತೆ ಆರು ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಇದನ್ನೂ ಓದಿ: ಬಿಟ್ಕಾಯಿನ್ ಅಕ್ರಮ ವರ್ಗಾವಣೆ ಆರೋಪ: ಬಂಧನ ಭೀತಿಯಲ್ಲಿ ಡಿವೈಎಸ್ಪಿ ಶ್ರೀಧರ್ ಪೂಜಾರ್ - Bitcoin Scam