ಮೈಸೂರು: "ಮುಡಾ ಪ್ರಕರಣ ಆದ ನಂತರ ಸಿದ್ದರಾಮಯ್ಯನವರಿಗೆ ದೇವರ ಮೇಲೆ ಭಕ್ತಿ ಬಂದಿದೆ. ಈಗ ದೇವರನ್ನು ಹುಡುಕಿಕೊಂಡು ಹೋಗಿ ದರ್ಶನ ಮಾಡಿ, ಕುಂಕುಮ ಹಾಕಿಕೊಳ್ಳತ್ತಿದ್ದಾರೆ" ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಸಿದ್ದರಾಮಯ್ಯರಿಗೆ ಈಗ ದೇವರು ಮಠಗಳು ನೆನಪಾಗಿವೆ. ಮುಡಾ ವಿಚಾರ ಮುನ್ನೆಲೆಗೆ ಬಂದ ಮೇಲಂತೂ ಅವರಿಗೆ ಹೆಚ್ಚಿನ ಭಕ್ತಿ ಬಂದಿದೆ. ಮೊದಲು ಕುಂಕುಮವೇ ಹಾಕಿಸಿಕೊಳ್ಳುತ್ತಿರಲಿಲ್ಲ. ಈಗ ಹುಡುಕಿಕೊಂಡು ಹೋಗಿ ದೇವರ ದರ್ಶನ ಮಾಡುತ್ತಿದ್ದಾರೆ. ಇದೆಲ್ಲಾ ಮುಡಾ ವಿಚಾರದ ಪ್ರಭಾವ" ಎಂದು ಹೇಳಿದರು.
"ದೀಪಕ್ಕೆ ಸಿಕ್ಕ ಪತಂಗದಂತಾಗಿದೆ ಕಾಂಗ್ರೆಸ್ ಸರ್ಕಾರದ ಸ್ಥಿತಿ. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿಕೊಳ್ಳುತ್ತಿದೆ. ಒಂದು ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಿದೆ. ಮುಡಾ, ವಕ್ಫ್ ಎಲ್ಲದರಲ್ಲೂ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ. ಈ ವಿಚಾರಗಳು ಈ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವುದಿಲ್ಲ. ಉಪಚುನಾವಣೆ ನಡೆಯುವುದೇ ಬೇರೆ ರೀತಿ. ಹಣ ಬಲ, ವೈಯುಕ್ತಿಕ ಬಲ, ಅಧಿಕಾರ ದುರುಪಯೋಗ ಎಲ್ಲವೂ ಇರುತ್ತದೆ. ಹೀಗಿದ್ದರೂ ಮೂರು ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರಕ್ಕೆ ಬಾರದ ಶಾಸಕ ಜಿ.ಟಿ. ದೇವೇಗೌಡರು: "ನಮ್ಮಲ್ಲಿ ಪ್ರಚಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜಿ.ಟಿ. ದೇವೆಗೌಡರು ಎರಡನೇ ಹಂತದ ನಾಯಕರಿಗೆ ಅವಕಾಶ ಕಲ್ಪಿಸಿದ್ದಾರೆ. ಜಿ. ಟಿ. ದೇವೇಗೌಡರ ಪ್ರಚಾರದಲ್ಲಿ ಮುಂದೆ ಎಲ್ಲಾ ಮಾತಾಡೋಣ. ಈಗ ಯಾಕೆ ಈ ವಿಚಾರ, ಸದ್ಯಕ್ಕೆ ಇಷ್ಟೇ ಸಾಕು. ಜಿಟಿಡಿ ವಿಚಾರದಲ್ಲಿ ಏನೇನು ಆಗುತ್ತಿದೆ ಎಂಬುದು ಮಾಧ್ಯಮದವರಿಗೆ ಚೆನ್ನಾಗಿ ಗೊತ್ತಿದೆ. ಅದನ್ಯಾಕೆ ನನ್ನ ಬಳಿ ಮತ್ತೆ ಮತ್ತೆ ಕೇಳುತ್ತಿದ್ದೀರಿ?" ಎಂದರು.
ಚನ್ನಪಟ್ಟಣ ಚುನಾವಣೆಯಲ್ಲಿ ಕೆರೆ ತುಂಬಿಸಿದ ಬಗ್ಗೆ ಕ್ರೆಡಿಟ್ ವಾರ್: "ದೇವೇಗೌಡರು ಇಗ್ಲೂರು ಡ್ಯಾಮ್ ಕಟ್ಟದಿದ್ದರೆ ಯಾರು ಕೆರೆ ತುಂಬಿಸಲು ಸಾಧ್ಯವಾಗುತಿತ್ತು? ಕೆರೆ ತುಂಬಿಸುವ ಯೋಜನೆಗೆ 105 ಕೋಟಿ ಕೊಟ್ಟ ಸದನಾಂದ ಗೌಡ ನಾನು ಭಗೀರಥ ಎಂದಿದ್ದಾರೆ. ಯೋಗೇಶ್ವರ್ ತುಂಬಿಸಿರೋದು ಕೇವಲ 17 ಕೆರೆಗಳು, ನಾನು 107 ಕೆರೆಗಳನ್ನು ತುಂಬಿಸಿದ್ದೇನೆ. ಇದರಲ್ಲಿ ಯಾರು ಹೆಚ್ಚು ಕೆರೆ ತುಂಬಿಸಿದ್ದು? ಹಾಗೆ ನೋಡುವುದಾದರೆ ಇದಕ್ಕೆಲ್ಲ, ಮೂಲ ಪುರುಷ ದೇವೇಗೌಡರು. ಅವರು ಇಗ್ಲೂರು ಡ್ಯಾಂ ಕಟ್ಟದಿದ್ದರೆ ಯಾರು ಕೆರೆ ತುಂಬಿಸುತ್ತಿದ್ದರು?" ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ NDA ಅಭ್ಯರ್ಥಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ: ಹೆಚ್ಡಿಕೆ ವಿಶ್ವಾಸ