ಶಿರಸಿ: "ರಾಜ್ಯದಲ್ಲಿ 5 ವರ್ಷಗಳ ಕಾಲ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಾರೆ" ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ಧರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಸಿದ್ಧರಾಮಯ್ಯ ಅನುಭವಿ ಹಾಗೂ ಒಳ್ಳೆಯ ನಾಯಕ. ಎಲ್ಲರೂ ಅದಕ್ಕೆ ಸಹಕರಿಸಬೇಕು" ಎಂದು ಹೇಳಿದರು.
ತಾವೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿದ್ದ ವಿಚಾರವಾಗಿ ಪ್ರತಿಕ್ರಿಯಿಸಿ "ಸಿದ್ಧರಾಮಯ್ಯ ಈಗಾಗಲೇ ಮುಖ್ಯಮಂತ್ರಿ ಆಗಿರುವಾಗ ನನ್ನನ್ನು ಮುಖ್ಯಮಂತ್ರಿ ಮಾಡುವ ಪ್ರಶ್ನೆ ಉದ್ಭವಿಸಲ್ಲ. ಅರ್ಹತೆ ಪ್ರಶ್ನೆ ಬೇರೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಬೇಕು. ಸರ್ಕಾರ ಇಷ್ಟು ಚೆನ್ನಾಗಿ ನಡೆಯುತ್ತಿರುವಾಗ ಬೇರೆ ಯಾರೂ ಕೂಡ ಇದರ ಬಗ್ಗೆ ಬೇರೆ ವಿಚಾರ ಮಾಡಬಾರದು" ಎಂದರು.
ನಾಗಮಂಗಲದಲ್ಲಿ ಗಣೇಶನ ಮೂರ್ತಿಯನ್ನು ಪೊಲೀಸ್ ಜೀಪಿನಲ್ಲಿ ತೆಗೆದುಕೊಂಡು ಹೋದ ಬಗ್ಗೆ ಮಾತನಾಡಿದ ದೇಶಪಾಂಡೆ, "ಇದು ಸರಿಯಲ್ಲ. ಮೆರವಣಿಗೆ ನಡೆದಾಗ ಎಲ್ಲರೂ ಸಹಕರಿಸಬೇಕು. ಗಣೇಶ ಎಲ್ಲರ ಪ್ರೀತಿಯ ದೇವರು. ಎಲ್ಲರಿಗೂ ಒಳ್ಳೆಯದನ್ನು ಮಾಡುವ ದೇವರು. ಇಂಥ ಸಂದರ್ಭದಲ್ಲಿ ಈ ಘಟನೆ ನನ್ನ ಮನಸ್ಸಿಗೂ ನೋವಾಗಿದೆ. ಇಂಥ ಘಟನೆಗಳು ಆಗಬಾರದು. ಇದನ್ನು ನಾವೆಲ್ಲ ಖಂಡಿಸಬೇಕು. ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರ ಪಾರದರ್ಶಕವಾಗಿ ಕ್ರಮ ಕೈಗೊಳ್ಳುತ್ತದೆ" ಎಂದರು.
"ಅಲ್ಲದೇ ಗೃಹ ಸಚಿವರು ನಾಗಮಂಗಲ ಗಲಾಟೆಯನ್ನು ಸಣ್ಣ ಘಟನೆ ಅಂತ ಹೇಳಿಲ್ಲ. ಮಾಧ್ಯಮದವರು ಸುಮ್ಮನೆ ತಪ್ಪು ತಿಳಿದುಕೊಂಡು ಬರೆಯುತ್ತೀರಿ" ಎಂದು ಸಮಜಾಯಿಷಿ ನೀಡಿದರು. ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಇದ್ದರು.